ಮುಂದಿನ 5 ವರ್ಷಗಳಲ್ಲಿ ರೋಬೋಟ್ಗಳು ವಿಶ್ವದ 85 ಮಿಲಿಯನ್ ಜನರ ನೌಕರಿಗಳನ್ನ ಕಸಿದುಕೊಳ್ಳಲಿದೆ ಅಂತಾ ವರ್ಲ್ಡ್ ಎಕಾನೊಮಿಕ್ ಫೋರಂ ಆಘಾತಕಾರಿ ಮಾಹಿತಿ ನೀಡಿದೆ.
ಸುಮಾರು 300 ಜಾಗತಿಕ ಮಟ್ಟದ ಕಂಪನಿಗಳ ಮೇಲೆ ನಡೆಸಲಾದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಕಂಪನಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ತಂತ್ರಜ್ಞಾನವನ್ನ ಹೆಚ್ಚಿಸುವ ಮೂಲಕ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡುವ ಯೋಚನೆಯಲ್ಲಿವೆ. ಕೋವಿಡ್ 19 ಉಂಟು ಮಾಡಿರುವ ಸಂಕಷ್ಟ ಕೂಡ ಈ ತಂತ್ರಜ್ಞಾನ ಅಭಿವೃದ್ಧಿ ಮಾಡಲು ಇನ್ನಷ್ಟು ಪ್ರೇರಣೆ ನೀಡಿದೆ ಅಂತಾ ಡಬ್ಲು ಇ ಎಫ್ ವ್ಯವಸ್ಥಾಪಕ ನಿರ್ದೇಶಕಿ ಸಾದಿಯಾ ಜಹಿದಿ ಹೇಳಿದ್ರು.
ಮುಂದಿನ 5 ವರ್ಷಗಳಲ್ಲಿ ಕಾರ್ಮಿಕರು ತಮ್ಮ ಕೆಲಸವನ್ನ ಉಳಿಸಿಕೊಳ್ಳಬೇಕು ಅಂದರೆ ಹೊಸ ಕೌಶಲ್ಯಗಳನ್ನ ರೂಢಿ ಮಾಡಿಕೊಳ್ಳಲೇಬೇಕು. 2025ರ ಹೊತ್ತಿಗೆ 50 ಪ್ರತಿಶತ ಸಿಬ್ಬಂದಿಯ ಕೆಲಸಗಳನ್ನ ಯಂತ್ರವೇ ನಿರ್ವಹಿಸಲಿದೆ ಅಂತಾ ಅಧ್ಯಯನ ಹೇಳಿದೆ.
ಕ್ರಮೇಣವಾಗಿ ಉದ್ಯೋಗ ಸೃಷ್ಟಿ ಪ್ರಕ್ರಿಯೆ ಮಂದವಾಗುತ್ತಾ ಹೋಗುತ್ತೆ ಹಾಗೂ ವಿಶ್ವಾದ್ಯಂತ ಕಂಪನಿಗಳು ಡೇಟಾ ಎಂಟ್ರಿ, ಅಕೌಂಟಿಂಗ್ ಹಾಗೂ ಆಡಳಿತ ಸಂಬಂಧಿ ಕಾರ್ಯಕ್ಕೆ ತಂತ್ರಜ್ಞಾನವನ್ನ ಬಳಸಿಕೊಳ್ಳಲಿವೆ. ಇದರಿಂದ ಉದ್ಯೋಗಾವಕಾಶ ನಾಶವಾಗಲಿದೆ. ಈ ಆತಂಕದ ನಡುವೆಯೂ ಅಧ್ಯಯನ ಸಿಹಿಸುದ್ದಿಯೊಂದನ್ನ ಕೊಟ್ಟಿದೆ. ಅದೇನಂದರೆ ಯಂತ್ರಗಳ ಉತ್ಪಾದನೆ ಕಾರ್ಯ ಚುರುಕುಗೊಳ್ಳೋದ್ರಿಂದ ಟೆಕ್ ಉದ್ಯಮದಲ್ಲಿ 97 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆಯಂತೆ.