ಆದಾಯ ತೆರಿಗೆ ಉಳಿಸಲು ಸೆಕ್ಷನ್ 80 ಸಿ ಹೆಚ್ಚು ಪ್ರಯೋಜನಕಾರಿ. ಅನೇಕ ಉಳಿತಾಯ ಯೋಜನೆಗಳು ಇದ್ರ ವ್ಯಾಪ್ತಿಗೆ ಬರುತ್ತವೆ. ಆದ್ರೆ 1.5 ಲಕ್ಷ ತೆರಿಗೆಯನ್ನು ಮಾತ್ರ ಇದ್ರಿಂದ ಉಳಿಸಬಹುದಾಗಿದೆ. ಸೆಕ್ಷನ್ 80 ಸಿ ಹೊರತುಪಡಿಸಿ ಉಳಿದ ಕೆಲ ಮಾರ್ಗಗಳು ತೆರಿಗೆ ಉಳಿಸಲು ನೆರವಾಗುತ್ತವೆ. ಅದ್ರ ವಿವರ ಇಲ್ಲಿದೆ.
ಎನ್ ಸಿ ಪಿ ( 80 ಸಿಸಿಡಿ(1ಬಿ)) : ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂಪಾಯಿಗಳ ತೆರಿಗೆಯನ್ನು ಉಳಿಸುತ್ತೀರಿ. ಆದರೆ ಸೆಕ್ಷನ್ 80 ಸಿಸಿಡಿ (1 ಬಿ) ಅಡಿಯಲ್ಲಿ 50,000 ರೂಪಾಯಿಗಳ ಹೆಚ್ಚುವರಿ ಉಳಿತಾಯವನ್ನು ಮಾಡಬಹುದು. ಅಂದರೆ ಒಟ್ಟು 2 ಲಕ್ಷ ರೂಪಾಯಿಗಳನ್ನು ಉಳಿಸಬಹುದು.
ಆರೋಗ್ಯ ವಿಮೆ (80 ಡಿ) : ಸೆಕ್ಷನ್ 80 ಡಿ ಅಡಿಯಲ್ಲಿ ಆರೋಗ್ಯ ವಿಮಾ ಪ್ರೀಮಿಯಂ ಪಡೆಯಬಹುದು. 80 ಡಿ ಅಡಿಯಲ್ಲಿ ಎಷ್ಟು ತೆರಿಗೆ ಉಳಿಸಬಹುದು ಎಂಬುದು ಯೋಜನೆ ಹಾಗೂ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಇದರಲ್ಲಿ 25,000 ರೂಪಾಯಿ, 50,000 ರೂಪಾಯಿ ಮತ್ತು 1 ಲಕ್ಷ ರೂಪಾಯಿಗಳವರೆಗೆ ತೆರಿಗೆ ಉಳಿತಾಯ ಮಾಡಬಹುದು.
ಶಿಕ್ಷಣ ಸಾಲ (80 ಇ) : ಮಕ್ಕಳ ಶಿಕ್ಷಣಕ್ಕಾಗಿ ಸಾಲವನ್ನು ತೆಗೆದುಕೊಂಡಿದ್ದು, ಅದನ್ನು ಮರುಪಾವತಿಸುವಾಗ ತೆರಿಗೆ ವಿನಾಯಿತಿ ಪಡೆಯಬಹುದು. ಸೆಕ್ಷನ್ 80 ಇ ಅಡಿಯಲ್ಲಿ ಶಿಕ್ಷಣ ಸಾಲದ ಬಡ್ಡಿಗೆ ತೆರಿಗೆ ರಿಯಾಯಿತಿ ಪಡೆಯಬಹುದು. ಈ ತೆರಿಗೆ ವಿನಾಯಿತಿಗೆ ಮಿತಿಯಿಲ್ಲ. ನೀವು ಬಯಸಿದಷ್ಟು ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು.
ಗೃಹ ಸಾಲ ಮರುಪಾವತಿಯ ಮೇಲೆ ಎರಡು ರೀತಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ಅಸಲು ಮೊತ್ತದಲ್ಲಿ 80 ಸಿ ಅಡಿಯಲ್ಲಿ 1.5 ಲಕ್ಷ ರೂಪಾಯಿಗಳ ತೆರಿಗೆ ರಿಯಾಯಿತಿ ಪಡೆಯಬಹುದು. ಜೊತೆಗೆ ಸೆಕ್ಷನ್ 24 ರ ಅಡಿಯಲ್ಲಿ ಬಡ್ಡಿ ಮೇಲೆ ರಿಯಾಯಿತಿ ಪಡೆಯಬಹುದು.
ಮೊದಲ ಬಾರಿಗೆ ಮನೆ ಖರೀದಿಸುವಾಗ (80 ಇಇ) : ಸೆಕ್ಷನ್ 80 ಇಇ ಅಡಿಯಲ್ಲಿ, ಸರ್ಕಾರ ಮೊದಲ ಮನೆಯನ್ನು ಖರೀದಿಸುವವರಿಗೆ ಗೃಹ ಸಾಲದ ಬಡ್ಡಿಗೆ ಹೆಚ್ಚುವರಿ ರಿಯಾಯಿತಿ ನೀಡುತ್ತದೆ. ನಿಮ್ಮ ಹೆಸರಿನಲ್ಲಿ ಬೇರೆ ಮನೆ ಇರಬಾರದು. ಈ ವಿಭಾಗದ ಅಡಿಯಲ್ಲಿ 50,000 ರೂಪಾಯಿವರೆಗೆ ಹೆಚ್ಚುವರಿ ತೆರಿಗೆಯನ್ನು ಪಡೆಯಬಹುದು. ಈ ವಿನಾಯಿತಿ ಸೆಕ್ಷನ್ 24 ರ ಅಡಿಯಲ್ಲಿ ನೀಡಲಾದ ವಿನಾಯಿತಿಗೆ ಹೆಚ್ಚುವರಿಯಾಗಿರುತ್ತದೆ. ಅಂದರೆ, ಮೊದಲ ಬಾರಿಗೆ ಮನೆ ಖರೀದಿದಾರರು ಗೃಹ ಸಾಲದ ಬಡ್ಡಿ ಯ ಮೇಲೆ ಮಾತ್ರ ವರ್ಷದಲ್ಲಿ ಕನಿಷ್ಠ 2.5 ಲಕ್ಷ ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತಾರೆ.
ಎಚ್ಆರ್ಎ (80 ಜಿಜಿ): ಸಂಬಳದಾರರಿಗೆ ಕಂಪನಿ ಎಚ್ಆರ್ಎ ನೀಡಿದರೆ ಬಾಡಿಗೆಗೆ ತೆರಿಗೆ ವಿನಾಯಿತಿ ಪಡೆಯುತ್ತೀರಿ. ಆದರೆ ಎಚ್ಆರ್ಎ ಪಡೆಯದಿದ್ದರೆ, ಮನೆ ಬಾಡಿಗೆಗೆ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿಲ್ಲ.
ಉಳಿತಾಯ ಖಾತೆ ಬಡ್ಡಿ (80 ಟಿಟಿಎ): ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿರುವ ಹಣದಿಂದಲೂ ನೀವು ತೆರಿಗೆ ರಿಯಾಯಿತಿ ಪಡೆಯಬಹುದು. ಸೆಕ್ಷನ್ 80 ಟಿಟಿಎ ಅಡಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಎಚ್ಯುಎಫ್ ಗರಿಷ್ಠ 10,000 ರೂಪಾಯಿವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಇದರಲ್ಲಿ ಬ್ಯಾಂಕುಗಳು, ಸಹಕಾರಿ ಸಂಘಗಳು ಅಥವಾ ಅಂಚೆ ಕಚೇರಿ ಉಳಿತಾಯ ಖಾತೆಗಳು ಸೇರಿವೆ.
ವಿಶೇಷ ರೋಗ ಚಿಕಿತ್ಸೆ (80 ಡಿಡಿಬಿ): ಕ್ಯಾನ್ಸರ್, ನರವೈಜ್ಞಾನಿಕ ಕಾಯಿಲೆ ಅಥವಾ ಏಡ್ಸ್ ನಂತಹ ಕೆಲವು ಕಾಯಿಲೆಗಳ ಚಿಕಿತ್ಸೆಯು ಸಾಕಷ್ಟು ದುಬಾರಿಯಾಗಿದೆ. ಸೆಕ್ಷನ್ 80 ಡಿಡಿಬಿ ಅಡಿಯಲ್ಲಿ ಸರ್ಕಾರ 40,000 ರೂಪಾಯಿಗಳವರೆಗೆ ತೆರಿಗೆ ವಿನಾಯಿತಿ ನೀಡುತ್ತದೆ. ಹಿರಿಯ ನಾಗರಿಕರ ವಿಷಯದಲ್ಲಿ ಈ ತೆರಿಗೆ ವಿನಾಯಿತಿ 1 ಲಕ್ಷ ರೂಪಾಯಿಯಾಗಿರುತ್ತದೆ.
ದಾನ (80 ಜಿ) : ದಾನ ಮಾಡಿದರೆ ಇದರ ಮೇಲೆ ತೆರಿಗೆ ಉಳಿಸಬಹುದು. ಸೆಕ್ಷನ್ 80 ಜಿ ಅಡಿಯಲ್ಲಿ ಮಾನ್ಯತೆ ಪಡೆದ ದತ್ತಿ ಸಂಸ್ಥೆಗೆ ನೀಡುವ ದೇಣಿಗೆ ತೆರಿಗೆ ವಿನಾಯಿತಿಗೆ ಒಳಪಟ್ಟಿರುತ್ತದೆ.