ದೆಹಲಿಯ ’ಬಾಬಾ ಕಾ ಢಾಬಾ’ದ ಹಿರಿಯ ಜೀವಗಳು ಕೋವಿಡ್-19 ಲಾಕ್ಡೌನ್ ಅವಧಿಯಲ್ಲಿ ಪಡುತ್ತಿದ್ದ ಪಾಡನ್ನು ಸಾಮಾಜಿಕ ಜಾಲತಾಣಗಳ ಮೂಲಕ ದೇಶವಾಸಿಗಳ ಮುಂದಿಟ್ಟ ಬಳಿಕ ಸಾರ್ವಜನಿಕರು ಅವರ ನೆರವಿಗೆ ನಿಂತ ಪರಿ ಇನ್ನೂ ನೆನಪಿನಲ್ಲಿ ಇರುವಂತೆಯೇ ಇನ್ನಷ್ಟು ಇದೇ ರೀತಿಯ ಆನೇಕರ ಪಾಡನ್ನು ಮುಂದಿಡುತ್ತಿದ್ದಾರೆ ಸಹೃದಯಿಗಳು.
ಆಗ್ರಾದ ’ಕಾಂಜಿ ಬಡೇವಾಲೆ’ಯಿಂದ ಹಿಡಿದು ಫರೀದಾಬಾದ್ನ ಭೇಲ್ಪುರಿ ವ್ಯಾಪಾರಿಯವರೆಗೂ ದೇಶವಾಸಿಗಳು ಬಹಳಷ್ಟು ಕಾಳಜಿ ತೋರಿದ್ದಾರೆ. ಸಂಕಷ್ಟದಲ್ಲಿ ಇರುವ ಮಂದಿಗೆ ನೆರವಾಗಲು ಸಾಕಷ್ಟು ಜನರು ಮುಂದೆ ಬರುತ್ತಿದ್ದಾರೆ.
ಇದೀಗ ಆಗ್ರಾದ 80 ವರ್ಷ ವಯಸ್ಸಿನ ’ರೋಟಿವಾಲಿ ಅಮ್ಮ’ ಕೊರೊನಾ ಅವಧಿಯಲ್ಲಿ ಪರದಾಡುತ್ತಿರುವ ದೃಶ್ಯಾವಳಿಗಳು ವೈರಲ್ ಆಗಿದೆ. ಪ್ರತಿನಿತ್ಯ ದಾಲ್, ರೋಟಿ, ಸಬ್ಜಿಗಳನ್ನು 20/ಪ್ಲೇಟ್ನಂತೆ ಉಣಬಡಿಸುವ ಇವರು ತಮ್ಮ ಪ್ರದೇಶದ ಸಾಕಷ್ಟು ಜನರ ಹಸಿವು ನೀಗಿಸುತ್ತಾ ಬಂದಿದ್ದಾರೆ.
“ನಾನು ಈ ಕೆಲಸವನ್ನು ಕಳೆದ 15 ವರ್ಷಗಳಿಂದ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವ ಮಾರಾಟವಾಗುತ್ತಿಲ್ಲ” ಎಂದು ನೋವಿನಿಂದ ಹೇಳಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇದೀಗ ಅವರ ನೆರವಿಗೆ ನಿಂತಿರುವ ಸಹೃದಯಿ ನೆಟ್ಟಿಗರು ಅವರಿಗಾಗಿ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ.
ಇಬ್ಬರು ಮಕ್ಕಳಿದ್ದರೂ ಸಹ ಇಳಿವಯಸ್ಸಿನಲ್ಲಿಯೂ ಬಹಳ ಕಷ್ಟಪಟ್ಟು ಜೀವನ ಸಾಗಿಸುತ್ತಿರುವ ರೋಟಿವಾಲಿ ಅಮ್ಮನಿಗೆ ತನ್ನ ವ್ಯವಹಾರವನ್ನು ಒಂದು ಕಡೆ ನಡೆಸಿಕೊಂಡು ಹೋಗಲು ಆಗುತ್ತಿಲ್ಲ.