ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಆರ್ಥಿಕತೆ ಕುಸಿದಿದೆ. ಆರ್ಥಿಕತೆ ಸುಧಾರಿಸಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡ್ತಿದೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಶೀಘ್ರವೇ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ದೀಪಾವಳಿ ಸಂದರ್ಭದಲ್ಲಿ ಹೊಸ ಘೋಷಣೆ ಮಾಡುವ ನಿರೀಕ್ಷೆಯಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಆರ್ಥಿಕತೆ ಸುಧಾರಿಸಲು ಪ್ರಯತ್ನಿಸುತ್ತಿರುವ ಹಣಕಾಸು ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಈ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ವಾರದ ಹಿಂದೆ ಸರ್ಕಾರ, ಸರ್ಕಾರಿ ನೌಕರರಿಗೆ ಎಲ್ ಇ ಟಿ ನಗದು ಚೀಟಿ ಘೋಷಣೆ ಮಾಡಿತ್ತು. ಖಾಸಗಿ ನೌಕರರಿಗೂ ಇದ್ರ ಲಾಭ ನೀಡುವ ಬಗ್ಗೆ ಆಲೋಚನೆ ಮಾಡಲಾಗ್ತಿದೆ.
ಈಗಾಗಲೇ ಎಲ್ ಇ ಟಿ ಲಾಭ ಪಡೆಯುತ್ತಿರುವ ನೌಕರರು ಹಾಗೂ ಹೊಸ ತೆರಿಗೆ ನೀತಿ ಅಳವಡಿಸಿಕೊಂಡಿರುವವರ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಠಾಕೂರ್ ಹೇಳಿದ್ದಾರೆ. ಮುಂದಿನ ವಾರದಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಹೊರ ಬರುವ ಸಾಧ್ಯತೆಯಿದೆ. ಸರ್ಕಾರಿ ಯೋಜನೆ ಬಗ್ಗೆ ಕೇಳಿ ಬರ್ತಿರುವ ಟೀಕೆಗೆ ಪ್ರತಿಕ್ರಿಯೆ ನೀಡಿದ ಠಾಕೂರ್, ಟೀಕೆಗಳು ಸಹಜವೆಂದಿದ್ದಾರೆ. 80 ಕೋಟಿ ಜನರಿಗೆ 8 ತಿಂಗಳು ಉಚಿತ ಧಾನ್ಯ ನೀಡಿದ ಏಕೈಕ ದೇಶ ಭಾರತವೆಂದು ಅವರು ಹೇಳಿದ್ದಾರೆ. ಇದಲ್ಲದೆ 68,000 ಕೋಟಿ ರೂಪಾಯಿಗಳನ್ನು ಬಡ ಜನರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದವರು ಹೇಳಿದ್ದಾರೆ.