ಬೆಂಗಳೂರು: ಬಸ್ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿಯಿಂದ ಸಿಹಿ ಸುದ್ದಿ ಸಿಕ್ಕಿದೆ. ವಾರಾಂತ್ಯದ ಸಂದರ್ಭದಲ್ಲಿ ದೂರದ ಊರುಗಳಿಗೆ ತೆರಳುವ ಹವಾನಿಯಂತ್ರಿತ ಬಸ್ ಹೆಚ್ಚುವರಿ ಪ್ರಯಾಣ ದರವನ್ನು ಹಿಂಪಡೆಯಲಾಗಿದೆ.
ಕೆಎಸ್ಆರ್ಟಿಸಿ ವತಿಯಿಂದ ಬಸ್ ಪ್ರಯಾಣ ದರ ಹೆಚ್ಚಳ ಆದೇಶವನ್ನು ಡಿಸೆಂಬರ್ 31ರವರೆಗೆ ಹಿಂಪಡೆಯಲಾಗಿದೆ. ವಾರಂತ್ಯದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಜನ ದೂರದ ಊರುಗಳಿಗೆ ಪ್ರಯಾಣಿಸುತ್ತಿದ್ದಾರೆ. ಕೊರೋನಾ ಲಾಕ್ಡೌನ್ ಕಾರಣದಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ಜನರನ್ನು ಆಕರ್ಷಿಸುವ ಉದ್ದೇಶದಿಂದ ಮೂಲ ಟಿಕೆಟ್ ಗಳ ಮೇಲೆ ವಿಧಿಸುತ್ತಿದ್ದ ಶೇಕಡ 10ರಷ್ಟು ಹೆಚ್ಚುವರಿ ದರವನ್ನು ಹಿಂಪಡೆಯಲಾಗಿದೆ. ವಾರಾಂತ್ಯದ ದಿನಗಳಲ್ಲಿ ಕೂಡ ಸಾಮಾನ್ಯ ದಿನಗಳಲ್ಲಿ ವಿಧಿಸುವ ದರ ನೀಡಿ ಪ್ರಯಾಣಿಸಬಹುದಾಗಿದೆ ಎಂದು ಕೆಎಸ್ಆರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಹೇಳಿದ್ದಾರೆ.