ಬೆಂಗಳೂರು: ಆರ್. ಆರ್. ನಗರ ಉಪ ಚುನಾವಣಾ ಅಖಾಡ ರಂಗೇರಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಈ ನಡುವೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕಂದಾಯ ಸಚಿವ ಆರ್. ಅಶೋಕ್, ಇದು ಟ್ರೇಲರ್ ಅಷ್ಟೇ 3 – 4 ದಿನಗಳಲ್ಲಿ ಸಿನಿಮಾ ತೋರಿಸುತ್ತೇವೆ ಎಂದು ಕಿಡಿಕಾರಿದ್ದಾರೆ.
ಇನ್ನು ಐದಾರು ದಿನ ಕಳೆದರೆ ಆರ್. ಆರ್. ನಗರದಲ್ಲಿ ಕಾಂಗ್ರೆಸ್ ಗೆ ಭೂತ್ ಏಜೆಂಟ್ ಸಹ ಸಿಗಲ್ಲ, ಅಂತಹ ಸ್ಥಿತಿ ಬರಲಿದೆ. ಕಾಂಗ್ರೆಸ್ ಗೆ ಒಬ್ಬ ಬಿಬಿಎಂಪಿ ಸದಸ್ಯನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹಲವು ಸದಸ್ಯರು ಬಿಜೆಪಿ ಸೇರಿದ್ದಾರೆ. ಇದು ಟ್ರೇಲರ್ ಅಷ್ಟೇ ಮೂರ್ನಾಲ್ಕು ದಿನಗಳಲ್ಲಿ ಸಿನಿಮಾ ತೋರಿಸುತ್ತೇವೆ ಎಂದು ಲೇವಡಿ ಮಾಡಿದ್ದಾರೆ.
ಇನ್ನು ಸಂಸದ ಡಿ. ಕೆ. ಸುರೇಶ್ ತಾನೇ ಆರ್. ಆರ್. ನಗರದ ಅಭ್ಯರ್ಥಿ ಅಂದುಕೊಂಡಿದ್ದಾರೆ. ಹಾಗಾಗಿ ತಮ್ಮ ಅಭ್ಯರ್ಥಿಯನ್ನೇ ಕಡೆಗಣಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಡಿ.ಕೆ. ಬ್ರದರ್ ಗೆ ಶಾಕ್ ನೀಡುವುದು ಖಚಿತ. 40-50 ಸಾವಿರ ಮತಗಳ ಅಂತರದಿಂದ ಮುನಿರತ್ನ ಗೆಲ್ಲಲಿದ್ದಾರೆ ಎಂದು ಹೇಳಿದ್ದಾರೆ.