ಬೆಂಗಳೂರು: ಪ್ರವಾಹ ಪೀಡಿತ ಜಿಲ್ಲೆಗೆ ಭೇಟಿ ನೀಡದೇ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾರೆ ಎಂದು ಒಂದು ಘಟನೆಯನ್ನಿಟ್ಟುಕೊಂಡು ವ್ಯಕ್ತಿಯನ್ನು ಅಳೆಯಬೇಡಿ. ನನಗೆ ವಯಸ್ಸಾಗಿದೆ. ಕೊರೊನಾದಿಂದಾಗಿ 600-700 ಕಿ.ಮೀ. ದೂರ ಪ್ರಯಾಣ ಮಾಡಲು ನನಗೆ ಶಕ್ತಿಯಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಾರಜೋಳ, ಅಸಹಾಯಕನಾಗಿ ನಾನು ಶಿರಾಗೆ ಹೋಗಿ ಬಂದಿದ್ದೇನೆ. ನಾನು ನನ್ನ ಇಡೀ ಕುಟುಂಬ ಕೊರೊನಾ ಸೋಂಕಿನಿಂದ ಬಳಲಿದ್ದೇವೆ. ನನಗೆ 70 ವರ್ಷ ವಯಸ್ಸಾಗಿದೆ. ನಾನು ಇಷ್ಟು ವರ್ಷ ಚೆನ್ನಾಗಿ ಕೆಲಸ ಮಾಡಿದ್ದೇನೆ. ಈಗ ಕೊವಿಡ್ ಹಾಗೂ ವಯಸ್ಸಿನ ಕಾರಣದಿಂದ 600-700 ಕಿ.ಮೀ ಹೋಗಲು ಅಸಹಾಯಕನಾಗಿದ್ದೇನೆ ಎಂದು ಭಾವುಕರಾದರು.
ನನ್ನ ಪರಿಸ್ಥಿತಿ ಅರಿತು ಮುಖ್ಯಮಂತ್ರಿ ಯಡಿಯೂರಪ್ಪನವರೇ, ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕಲಬುರಗಿ ಜಿಲ್ಲೆ ಭೇಟಿಗೆ ಕಳುಹಿಸಿದ್ದಾರೆ. ನನ್ನ ಕಷ್ಟವೇನು ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದೇನೆ. ಒಂದು ವಿಷಯವನ್ನು ಹೀಗೆ ಎಳೆಯುವುದು ಸರಿಯಲ್ಲ ಎಂದರು.