ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದು ನರೇಗಾ ಉದ್ಯೋಗ. ಇಡೀ ದೇಶದಲ್ಲಿ ಈ ಯೋಜನೆ ಅನೇಕ ಫಲಾನುಭವಿಗಳಿಗೆ ದೊರಕುತ್ತಿದೆ. ಆದರೆ ಈ ಯೋಜನೆಯಲ್ಲಿ ಇದೀಗ ಭ್ರಷ್ಟಾಚಾರದ ವಾಸನೆ ಎದ್ದು ಬರುತ್ತಿದೆ. ಮಧ್ಯಪ್ರದೇಶದ ಜಿರ್ನ್ಯಾ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನಡೆದಿದೆ.
ಹೌದು, ಈ ಹಿಂದೆ ನಡೆದಿದ್ದ ರೀತಿಯಲ್ಲಿಯೇ ಮತ್ತೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮನರೇಗಾ ಯೋಜನೆಯಡಿಯಲ್ಲಿ ಬರುವ ಫಲಾನುಭವಿಗಳಿಗೆ ಜಾಬ್ ಕಾರ್ಡ್ ನೀಡಬೇಕು. ಈ ಕಾರ್ಡ್ ನೀಡುವಾಗ ಅವರ ವಿಳಾಸ ಹಾಗೂ ಫೋಟೋಗಳನ್ನು ಬಳಸಲಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಅಲ್ಲಿನ ಪಂಚಾಯತ್ ಅಧ್ಯಕ್ಷ, ಕಾರ್ಯದರ್ಶಿ, ಉದ್ಯೋಗ ಸಹಾಯಕ ಸೇರಿದಂತೆ ಹಲವಾರು ಮಂದಿ ನಕಲಿ ಜಾಬ್ ಕಾರ್ಡ್ ಸೃಷ್ಟಿ ಮಾಡಿದ್ದಾರೆ.
ಅಷ್ಟೆ ಅಲ್ಲ ಬಾಲಿವುಡ್ ನಟ-ನಟಿಯರ ಫೋಟೋ ಬಳಸಿದ್ದಾರೆ. ಮೋನು ದುಬೆ ಹೆಸರಿನ ಫಲಾನುಭವಿಯ ಜಾಬ್ ಕಾರ್ಡ್‌ಗಳಲ್ಲಿ ದೀಪಿಕಾ ಪಡುಕೋಣೆ ಫೋಟೋ ಬಳಸಲಾಗಿದೆ. ಸೋನು ಎಂಬ ಮತ್ತೊಬ್ಬ ಫಲಾನುಭವಿ ಕಾರ್ಡ್‌ನಲ್ಲಿ ಆತನ ಫೋಟೋ ಬದಲು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಫೋಟೋ ಹಾಕಲಾಗಿದೆ. ಇನ್ನು ಈ ಸಂಬಂಧ ಜಿಲ್ಲಾ ಪಂಚಾಯತ್ ಸಿಇಒ ಗೌರವ್ ಬೆನಾಲ್‌ಗೆ ಫಲಾನುಭವಿಗಳು ದೂರು ನೀಡಿದ್ದಾರೆ. ಈ ಪ್ರಕರಣವನ್ನು ತನಿಖೆ ನಡೆಸಲು ಅಲ್ಲಿನ ಪಂಚಾಯತ್ ಸಿಇಒ ಆದೇಶ ಮಾಡಿದ್ದಾರೆ.