ಮೈಸೂರು: ಮಹಾಮಳೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ 9952 ಕೋಟಿ ರೂಪಾಯಿಯಷ್ಟು ನಷ್ಟವುಂಟಾಗಿದೆ. ಉತ್ತರ ಕರ್ನಾಟಕದ ಜನರ ಜೊತೆಗೆ ರಾಜ್ಯ ಸರ್ಕಾರ ನಿಲ್ಲುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿಗೆ ದೂರವಾಣಿ ಮೂಲಕ ಪ್ರವಾಹ ಪರಿಸ್ಥಿತಿ ಕುರಿತಾಗಿ ಮಾಹಿತಿ ನೀಡಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಮನೆ, ಜಮೀನು ಸೇರಿ 9952 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವರು ಭೇಟಿ ನೀಡಿದ್ದಾರೆ. ಪ್ರವಾಹ ಪ್ರದೇಶದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಅಲ್ಲದೆ, ಗ್ರಾಮಗಳ ಸ್ಥಳಾಂತರಕ್ಕೆ ಯೋಜನೆ ರೂಪಿಸಲು ತಿಳಿಸಲಾಗಿದೆ. ಬೆಳೆ ಪರಿಹಾರ ಹಣ ಬಿಡುಗಡೆಯಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಜನರನ್ನು ಸ್ಥಳಾಂತರ ಮಾಡಿ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ರಾಜ್ಯದ 51,810 ರೈತರಿಗೆ ಬೆಳೆ ಪರಿಹಾರವಾಗಿ 36.57 ಕೋಟಿ ರೂ, ನೇರವಾಗಿ ಖಾತೆಗೆ ಜಮಾ ಮಾಡಲಾಗಿದೆ. ಜೀವ, ಆಸ್ತಿ ಹಾನಿಗೆ ವಾರದೊಳಗೆ ಪರಿಹಾರ ನೀಡಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.