ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರನ್ನು ತನಿಖೆಗೆ ಒಳಪಡಿಸಬೇಕೆಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಒತ್ತಾಯಿಸಿದ್ದಾರೆ.
ಮಾದಕ ವಸ್ತು ನಿಯಂತ್ರಣ ಬ್ಯೂರೋ(NCB) ವತಿಯಿಂದ ಡ್ರಗ್ಸ್ ಸೇವನೆ, ಸಂಭಾವ್ಯ ಸಂಪರ್ಕದ ಕುರಿತಾಗಿ ವಿವೇಕ್ ಒಬೆರಾಯ್ ಅವರನ್ನು ತನಿಖೆಗೆ ಒಳಪಡಿಸಬೇಕೆಂದು ಅನಿಲ್ ದೇಶ್ ಮುಖ್ ಶುಕ್ರವಾರ ಹೇಳಿದ್ದಾರೆ.
ಕನ್ನಡ ಚಲನಚಿತ್ರೋದ್ಯಮದ ಕೆಲವರನ್ನು ಒಳಗೊಂಡ ಡ್ರಗ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಗುರುವಾರ ವಿವೇಕ್ ಒಬೆರಾಯ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ವಿವೇಕ್ ಒಬೆರಾಯ್ ಅವರ ಪತ್ನಿ ಪ್ರಿಯಾಂಕಾ ಆಳ್ವ ಸಹೋದರ ಆದಿತ್ಯ ಆಳ್ವ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ.
ಬೆಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ತನಿಖೆಯಲ್ಲಿ ಹೆಸರಿಸಲ್ಪಟ್ಟ ಆದಿತ್ಯ ಆಳ್ವರನ್ನು ಹುಡುಕುತ್ತಿದ್ದು, ಆತ ಸಿಕ್ಕಿಲ್ಲ. ಕರ್ನಾಟಕದ ಮಾಜಿ ಸಚಿವ ದಿ. ಜೀವರಾಜ್ ಆಳ್ವ ಮತ್ತು ನಂದಿನಿ ಆಳ್ವ ಅವರ ಪುತ್ರಿ ಪ್ರಿಯಾಂಕಾ ಆಳ್ವ ಅವರಿಗೆ ಬೆಂಗಳೂರು ಕೇಂದ್ರ ಅಪರಾಧ ವಿಭಾಗ ನೋಟಿಸ್ ನೀಡಿದೆ ಎಂದು ಹೇಳಲಾಗಿದೆ.
ವಿವೇಕ್ ಒಬೇರಾಯ್ ಅವರನ್ನು ಎನ್.ಸಿ.ಬಿ. ತನಿಖೆಗೆ ಒಳಪಡಿಸಬೇಕು. ಎನ್.ಸಿ.ಬಿ. ಪ್ರಕರಣದ ತನಿಖೆ ನಡೆಸದಿದ್ದರೆ ತನಿಖೆ ನಡೆಸುವಂತೆ ನಾವು ಮುಂಬೈ ಪೊಲೀಸರಿಗೆ ಸೂಚನೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ವಿವೇಕ್ ಒಬೆರಾಯ್, ಸಂದೀಪ್ ಸಿಂಗ್ ಅವರಿಗೆ ಸಂಬಂಧವಿದೆ. ಇವರಿಬ್ಬರಿಗೂ ಎನ್.ಸಿ.ಬಿ. ಸಮನ್ಸ್ ನೀಡಿ ತನಿಖೆ ನಡೆಸಲಿ ಎಂದು ಅವರು ಹೇಳಿದ್ದಾರೆ. ಸಂದೀಪ್ ಸಿಂಗ್ ಅವರು ಪ್ರಧಾನಿ ಮೋದಿ ಜೀವನ ಚರಿತ್ರೆ ಕುರಿತಾದ ಸಿನಿಮಾ ನಿರ್ಮಿಸಿದ್ದರು. ಮೋದಿ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ಅಭಿನಯಿಸಿದ್ದರು.