ಚಿನ್ನ ಖರೀದಿದಾರರಿಗೆ ನಿರಂತರ ಖುಷಿ ಸುದ್ದಿ ಸಿಗ್ತಿದೆ. ದೇಶಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬರ್ತಿದೆ. ಸತತ ನಾಲ್ಕನೇ ದಿನ ಶುಕ್ರವಾರ ಚಿನ್ನದ ಮೇಲೆ ಇಳಿದಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 50,653 ಕ್ಕೆ ಇಳಿದಿದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 61,512 ರೂಪಾಯಿಯಾಗಿದೆ.
ಅಕ್ಟೋಬರ್ 17 ರಿಂದ ಭಾರತದಲ್ಲಿ ನವರಾತ್ರಿ ಪ್ರಾರಂಭವಾಗ್ತಿದೆ. ನವರಾತ್ರಿ ಸಂದರ್ಭದಲ್ಲಿ ಬಂಗಾರಕ್ಕೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಬಂಗಾರದ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಆಗಸ್ಟ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 56,200 ರೂಪಾಯಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿತ್ತು. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 80,000 ರೂಪಾಯಿಯಾಗಿತ್ತು. ಅದಾದ ನಂತ್ರ ಈವರೆಗೆ ಚಿನ್ನ ಹತ್ತು ಗ್ರಾಂಗೆ 5547 ರೂಪಾಯಿವರೆಗೆ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಇಲ್ಲಿಯವರೆಗೆ 18488 ರೂಪಾಯಿ ಇಳಿಕೆ ಕಂಡಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬಂಗಾರದ ಬೆಲೆ ಶೇಕಡಾ 1ರಷ್ಟು ಇಳಿಕೆ ಕಂಡಿದ್ದು, 1,906.39 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಬೆಲೆ ಶೇಕಡಾ 2ರಷ್ಟು ಇಳಿಕೆ ಕಂಡಿದ್ದು, 24.26 ಡಾಲರ್ ಪ್ರತಿ ಔನ್ಸ್ ಆಗಿದೆ. ಎಲ್ಲ ದೇಶಗಳು ಆರ್ಥಿಕತೆಯನ್ನು ಬಲಪಡಿಸುವಲ್ಲಿ ನಿರತವಾಗಿವೆ. ಮುಂದಿನ ವರ್ಷದ ವೇಳೆಗೆ ಬಲವಾದ ಡಾಲರ್‌ನೊಂದಿಗೆ ಚಿನ್ನದ ಬೆಲೆಯಲ್ಲಿ ಹಠಾತ್ ಏರಿಕೆ ಕಂಡು ಬರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.