ದೇಶಾದ್ಯಂತ ಸಾಮಾಜಿಕ ಜಾಲತಾಣಗಳು ಹಾಗೂ ಮುಖ್ಯ ವಾಹಿನಿ ಮಾಧ್ಯಮಗಳಲ್ಲಿ ಬಿತ್ತರಗೊಂಡ ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಇನ್ನೊಂದು ಟ್ವಿಸ್ಟ್ ಸಿಕ್ಕಿದೆ.
ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಘಟನೆಯ ಸಂತ್ರಸ್ತೆಯದ್ದು ಎಂದು ಹೇಳಿಕೊಂಡು ಕೆಲವೊಂದು ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡು ಸಂತಾಪ ಸೂಚಿಸುವ ಭರದಲ್ಲಿ ಬಹಳಷ್ಟು ರಾದ್ಧಾಂತಗಳಾಗಿಬಿಟ್ಟಿವೆ.
ಭಾರತೀಯ ದಂಡಸಂಹಿತೆಯ 228A ವಿಧಿ ಅನುಸಾರ ಅತ್ಯಾಚಾರ ಸಂತ್ರಸ್ತೆ ಎಂದು ಹೇಳಲಾದ ವ್ಯಕ್ತಿಯ ಹೆಸರನ್ನಾಗಲೀ, ಛಾಯಾಚಿತ್ರವನ್ನಾಗಲೀ ಎಲ್ಲೂ ಬಿತ್ತರ ಮಾಡುವಂತಿಲ್ಲ. ಆದರೂ ಸಹ ಈ ಬಗ್ಗೆ ಕ್ಯಾರೇ ಎನ್ನದ ನೆಟ್ಟಿಗ ಸಮುದಾಯ ವಿಪರೀತಕ್ಕಿಳಿದುಬಿಟ್ಟಿತ್ತು.
ಇದೀಗ, ಹತ್ರಾಸ್ ಸಂತ್ರಸ್ತೆ ಎಂದು ಹೇಳಿಕೊಂಡು ಬಿತ್ತರ ಮಾಡಲಾಗುತ್ತಿರುವ ಛಾಯಾಚಿತ್ರ ಮೃತಪಟ್ಟಿರುವ ತನ್ನ ಮಡದಿಯದ್ದು ಎಂದು ಹೇಳಿರುವ ವ್ಯಕ್ತಿಯೊಬ್ಬರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಗಮನ ಹರಿಸಲು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಮಂತ್ರಾಲಯಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ ಕೊಟ್ಟಿದೆ.
ಒಂದು ವೇಳೆ ಈ ವ್ಯಕ್ತಿ ಹೇಳುತ್ತಿರುವುದರಲ್ಲಿ ನಿಜಾಂಶ ಕಂಡುಬಂದಲ್ಲಿ, ಸಾಮಾಜಿಕ ಜಾಲತಾಣಗಳಿಗೆ ಈ ಸಂಬಂಧ ಅಗತ್ಯ ನಿರ್ದೇಶನಗಳನ್ನು ತ್ವರಿತವಾಗಿ ನೀಡಬೇಕೆಂದು ಕೋರ್ಟ್ ಇದೇ ವೇಳೆ ತಿಳಿಸಿದೆ.