
ಗುವಾಹಟಿ: ಲವ್ ಜಿಹಾದ್ ಮದುವೆ ರದ್ದು, ಸರ್ಕಾರಿ ಮದ್ರಸಾ, ಸಂಸ್ಕೃತ ಪಾಠಶಾಲೆಗಳನ್ನು ಮುಚ್ಚಲು ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಅಸ್ಸಾಂನಲ್ಲಿ ಸರ್ಕಾರಿ ಮತ್ತು ಅನುದಾನಿತ ಮದರಸಾಗಳನ್ನು ಬಂದ್ ಮಾಡಲಾಗುವುದು. ಇದೇ ವೇಳೆ ಲವ್ ಜಿಹಾದ್ ಮೂಲಕ ನಡೆದ ಮದುವೆಗಳನ್ನು ರದ್ದುಪಡಿಸಲಾಗುವುದು. ಸಂಸ್ಕೃತ ಪಾಠಶಾಲೆಗಳನ್ನು ಕೂಡ ಮುಚ್ಚಲು ನಿರ್ಧರಿಸಲಾಗಿದೆ. ಮದ್ರಸಾಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಲಾಗುವುದು.
ತೀವ್ರ ವಿರೋಧದ ನಡುವೆಯೂ ಸರ್ಕಾರ ಈ ನಿರ್ಧಾರ ಪ್ರಕಟಿಸಿದ್ದು ಸರ್ಕಾರದ ವೆಚ್ಚದಲ್ಲಿ ಯಾವುದೇ ಧಾರ್ಮಿಕ ಶಿಕ್ಷಣ ನೀಡುವುದಿಲ್ಲವೆಂದು ತಿಳಿಸಲಾಗಿದೆ. ಅಸ್ಸಾಂನಲ್ಲಿ ಹೆಚ್ಚುತ್ತಿರುವ ಮೋಸದ ಮದುವೆ ರದ್ದು ಮಾಡಲಾಗುವುದು. ಅನ್ಯ ಧರ್ಮದ ಮದುವೆಗೆ ವಿರುದ್ಧವಾಗಿಲ್ಲ. ಆದರೆ ಮೋಸದಿಂದ ನಡೆಯುವ ಮದುವೆಗಳನ್ನು ರದ್ದುಪಡಿಸಲಾಗುವುದು. ಹೆಣ್ಣು ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಸ್ಸಾಂ ಶಿಕ್ಷಣ ಮತ್ತು ಹಣಕಾಸು ಸಚಿವ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.