ನವದೆಹಲಿ: ಮಹಿಳೆಯರ ಹಕ್ಕಿನ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದವರಿಗೆ ಮಾವನ ಮನೆಯಲ್ಲಿ ಉಳಿದುಕೊಳ್ಳಲು ಹಕ್ಕಿದೆ ಎಂದು ತಿಳಿಸಿದೆ.
ಮಹಿಳೆಯರ ಹಕ್ಕುಗಳ ಕುರಿತಂತೆ 2007 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಗೃಹ ಹಿಂಸಾಚಾರ ಸಂತ್ರಸ್ತರಿಗೆ ಹಂಚಿಕೆಯ ಮನೆಯ ಹಕ್ಕುಗಳನ್ನು ನೀಡುವ ಹಿಂದಿನ ತೀರ್ಪನ್ನು ರದ್ದುಗೊಳಿಸಲಾಗಿದೆ. ಗಂಡನ ಸಂಬಂಧಿಕರ ಒಡೆತನದಲ್ಲಿದ್ದ ಮನೆ ಕೂಡ ವಾಸಿಸುವ ಹಕ್ಕನ್ನು ಪಡೆಯಬಹುದು ಎಂದು ಹೇಳಲಾಗಿದೆ.
ವಿವಾದಗಳಿಂದಾಗಿ ಕೆಲವೊಮ್ಮೆ ಮನೆಯಿಂದ ಹೊರಗುಳಿಯುವ ಮಹಿಳೆಯರು ತಮ್ಮ ಮನೆ ಗಂಡನ ಸಂಬಂಧಿಕರ ಒಡೆತನದಲ್ಲಿದ್ದು, ಹಂಚಿಕೆಯಾದ ಮನೆಯಲ್ಲಿ ವಾಸಿಸುವ ಹಕ್ಕು ಪಡೆಯಬಹುದು. ಮದುವೆಯಾಗಿ ಗಂಡನ ಮನೆ ಪ್ರವೇಶಿಸಿದ ಮಹಿಳೆ ಕೌಟುಂಬಿಕ ಕಾರಣದಿಂದ ಹೊರಗುಳಿಯುವ ಪರಿಸ್ಥಿತಿ ಎದುರಾಗುತ್ತದೆ. ಯಾವುದೇ ಸಮಾಜದ ಪ್ರಗತಿ ತನ್ನ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಕೋರ್ಟ್ ಹೇಳಿದೆ.
ಸಂವಿಧಾನದ ಪ್ರಕಾರ ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಖಾತ್ರಿಪಡಿಸಬೇಕಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂ.ಆರ್. ಶಾ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪು ನೀಡಿದೆ.
ಈ ತೀರ್ಪು ವಿವಾಹವಾದ ಮನೆಯಿಂದ ಬಲವಂತವಾಗಿ ಹೊರಹಾಕಲ್ಪಟ್ಟ ಮಹಿಳೆಯರಿಗೆ ದೊಡ್ಡ ಪರಿಹಾರ ನೀಡುವಂತಿದೆ. ಗಂಡನ ಮನೆ ಅತ್ತೆ ಮತ್ತು ಮಾವನ ಏಕೈಕ ಆಸ್ತಿ ಎಂಬ ಕಾರಣಕ್ಕೆ ಪರಿಹಾರ ನಿರಾಕರಿಸಬಾರದು. ಹಿರಿಯ ನಾಗರಿಕರು ಮಗ ಮತ್ತು ಸೊಸೆ ನಡುವಿನ ವೈವಾಹಿಕ ಭಿನ್ನಾಭಿಪ್ರಾಯದ ಹೊರತಾಗಿ ಶಾಂತಿಯುತವಾಗಿ ಬದುಕಲು ಅರ್ಹರಾಗಿರುತ್ತಾರೆ. ಸಂಬಂಧಿತ ನ್ಯಾಯಾಲಯವು ಪರಿಹಾರ ನೀಡುವಾಗ ಎರಡೂ ಕಡೆಯವರ ಹಕ್ಕುಗಳನ್ನು ಸಮತೋಲನಗೊಳಿಸಬೇಕಾಗಿದೆ ಎಂದು ಉನ್ನತ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.