ಬೆಂಗಳೂರು: ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರಕ್ಕೆ ನಮ್ಮ ಒಪ್ಪಿಗೆಯಿಲ್ಲವೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಕಬ್ಬು ಖರೀದಿ ನಿಯಂತ್ರಣ ಮಂಡಳಿ ಸಭೆಯ ಬಳಿಕ ಅವರು ಮಾತನಾಡಿ, 1 ಟನ್ ಕಬ್ಬು ಬೆಳೆಯಲು 3050 ರೂ. ಖರ್ಚಾಗುತ್ತದೆ. ಕಬ್ಬು ಸಂಶೋಧನಾ ಕೇಂದ್ರಗಳೇ ಈ ಬಗ್ಗೆ ವರದಿ ನೀಡಿವೆ. ಹೀಗಾಗಿ FRP ದರ 3300 ರೂಪಾಯಿ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ದರ ಮರು ಪರಿಶೀಲನೆಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೆ ದರ ಹೆಚ್ಚಳಕ್ಕೆ ಪತ್ರ ಬರೆಯಲು ಕೋರಲಾಗಿದೆ. ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿರುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ನಿಗದಿ ಮಾಡಿದ ದರಕ್ಕೆ ನಮಗೆ ಒಪ್ಪಿಗೆಯಿಲ್ಲ. ಕೂಡಲೇ ಪರಿಷ್ಕೃತ ದರ ನಿಗದಿ ಮಾಡಬೇಕೆಂದು ಒತ್ತಾಯಿಸಲಾಗಿದೆ. ಸರ್ಕಾರಕ್ಕೆ ನಾವು ಒಂದು ವಾರ ಸಮಯ ಕೊಡುತ್ತೇವೆ. ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ದರ ಹೆಚ್ಚಳ ಮಾಡಿಸಬೇಕು. ಇಲ್ಲದಿದ್ದರೆ ರೈತರು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.