ಪತಿಯಿಂದ ಸತತ ಒಂದು ವರ್ಷಗಳ ಕಾಲ ಶೌಚಾಲಯದಲ್ಲಿ ಸೆರೆಮೆನೆ ವಾಸಕ್ಕೀಡಾಗಿದ್ದ ಪತ್ನಿಯನ್ನ ರಕ್ಷಣೆ ಮಾಡಿದ ಘಟನೆ ಹರಿಯಾಣ ರಾಜ್ಯದ ಪಾಣಿಪತ್ನ ರಿಶ್ಪುರ್ ಗ್ರಾಮದಲ್ಲಿ ನಡೆದಿದೆ. ಬಾಲ್ಯ ವಿವಾಹ ತಡೆ ಹಾಗೂ ಮಹಿಳಾ ರಕ್ಷಣಾ ಇಲಾಖೆ ನೇತೃತ್ವದಲ್ಲಿ ಮಹಿಳೆಯನ್ನ ರಕ್ಷಣೆ ಮಾಡಲಾಗಿದೆ.
ಪ್ರಕರಣ ಸಂಬಂಧ ಮಾತನಾಡಿದ ಬಾಲ್ಯವಿವಾಹ ತಡೆ ಹಾಗೂ ಮಹಿಳಾ ರಕ್ಷಣಾ ಇಲಾಖೆ ಅಧಿಕಾರಿ ರಜನಿ ಗುಪ್ತಾ, ಮಹಿಳೆಯನ್ನ ಶೌಚಾಲಯದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ದೊರಕಿತ್ತು. ಹೀಗಾಗಿ ನಮ್ಮ ತಂಡದ ಜೊತೆ ಇಲ್ಲಿಗೆ ಬಂದ ವೇಳೆ ಇದು ಸತ್ಯವಾದ ಮಾಹಿತಿ ಎಂಬ ಅಂಶ ಗೊತ್ತಾಯ್ತು. ಸಂತ್ರಸ್ತೆಯನ್ನ ನೋಡ್ತಿದ್ರೆ ಆಕೆಗೆ ಅನೇಕ ದಿನಗಳಿಂದ ಆಹಾರವನ್ನೇ ನೀಡಲಾಗಿಲ್ಲ ಎಂದು ಎನಿಸುತ್ತಿದೆ ಅಂತಾ ಹೇಳಿದ್ರು.
ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದರಿಂದ ಈ ರೀತಿ ಮಾಡಿದ್ದೇವೆ ಅಂತಾ ಆಕೆಯ ಪತಿ ಹೇಳುತ್ತಿದ್ದಾನೆ . ಆದರೆ ಸಂತ್ರಸ್ತೆ ಜೊತೆ ಮಾತನಾಡುತ್ತಿದ್ರೆ ಆಕೆ ಮಾನಸಿಕ ಅಸ್ವಸ್ಥೆ ಅಲ್ಲ ಅಂತಾ ಮೇಲ್ನೋಟಕ್ಕೆ ಕಂಡು ಬರ್ತಿದೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಸಂತ್ರಸ್ತೆಯನ್ನ ವೈದ್ಯರೂ ಉಪಚರಿಸ್ತಾ ಇದ್ರೂ ಸಹ ಆಕೆಯ ಆರೋಗ್ಯದಲ್ಲಿ ಯಾವುದೇ ಪ್ರಗತಿ ಕಾಣ್ತಿಲ್ಲ ಅಂತಾ ರಜನಿ ಗುಪ್ತಾ ಮಾಹಿತಿ ನೀಡಿದ್ದಾರೆ.