ಮೈಸೂರು: ನವರಾತ್ರಿ ಹಬ್ಬಕ್ಕೆ ಇನ್ನೇನು ಎರಡು ದಿನಗಳು ಮಾತ್ರ ಬಾಕಿಯಿದೆ. ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಜನರಿಲ್ಲದೇ ಸರಳವಾಗಿ ನಡೆಯಲಿದೆ. ಈ ನಡುವೆ ಚಾಮುಂಡಿ ಬೆಟ್ಟಕ್ಕೆ ಗ್ರಾಮೀಣ ಭಾಗದ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂಬ ಜಿಲ್ಲಾಡಳಿತದ ಆದೇಶಕ್ಕೆ ಆಕ್ರೋಶ ವ್ಯಕ್ತವಾಗಿದೆ.
ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಈ ಕ್ರಮಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ದಸರಾದಂತಹ ಸಮಯದಲ್ಲಿ ನಾಡ ಅಧಿದೇವತೆ ದರ್ಶನಕ್ಕೆ ಭಕ್ತರಿಗೆ ಪ್ರವೇಶ ನೀಡದಿರುವುದು ಸರಿಯಲ್ಲ. ಜಿಲ್ಲಾಡಳಿತದ ಕ್ರಮ ತಟ್ಟೆಯಲ್ಲಿ ಊಟವಿಟ್ಟು ತಿನ್ನಬೇಡ ಎಂಬಂತಾಗಿದೆ ಎಂದು ಇತಿಹಾಸಕಾರ ಪ್ರೊ.ನಂಜರಾಜೇ ಅರಸ್ ಕಿಡಿಕಾರಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಎಂದು ಘೋಷಣೆ ಮಾಡಿ ಮೈಸೂರು ತುಂಬಾ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಆದರೆ ಚಾಮುಂಡಿ ಬೆಟ್ಟಕ್ಕೆ ಮಾತ್ರ ಭಕ್ತರಿಗೆ ನಿರ್ಬಂಧ ಹೇರಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ ಹೇರಿರುವ ಕ್ರಮ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ದಸರಾಗೆ ನಿರ್ಬಂಧ ಹೇರಿರುವ ಕ್ರಮವನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.