ಎರ್ನಾಕುಲಂ: “ ನಾವು ಭಿಕ್ಷೆ ಬೇಡುವುದನ್ನು ಬಿಟ್ಟು ಸ್ವ ಉದ್ಯೋಗ ಮಾಡಿ ಗೌರವದ ಜೀವನ ನಡೆಸಲು ಮುಂದಾಗಿದ್ದೆವು. ಆದರೆ, ಕೆಲವರು ಅದನ್ನೂ ಮಾಡಲು ಬಿಡುತ್ತಿಲ್ಲ. ಹಾಗಿದ್ದರೆ ನಾವು ಹೇಗೆ ಬದುಕಬೇಕು…?”
ಇದು ಕೇರಳ ತೃತೀಯ ಲಿಂಗಿ ಸಜನಾ ಎಂಬುವವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಂಡ ಕಣ್ಣೀರ ಕತೆ. ಅವರ ಗೋಳು ಕೇಳಿ ನೆಟ್ಟಿಗರು ಮರುಗಿದ್ದಾರೆ. ಅವರ ಬೆಂಬಲಕ್ಕೆ ಬಂದಿದ್ದಾರೆ.
ಕೇರಳ ಎರ್ನಾಕುಲಂ ಜಿಲ್ಲೆಯವರಾದ ಸಜನಾ ಆಕೆಯ ಇತರ ಸ್ನೇಹಿತೆಯರನ್ನು ಸೇರಿಸಿಕೊಂಡು ತಮ್ಮ ಉಳಿತಾಯದ ಹಣ ಸೇರಿಸಿ ಸಣ್ಣ ಬಿರ್ಯಾನಿ ಅಂಗಡಿ ತೆರೆದಿದ್ದರು. ಕಕನಾಡ್ – ತ್ರಿಪುನೀತಪುರ ಬೈಪಾಸ್ ಬಳಿ ಗೂಡಂಗಡಿ ಇಟ್ಟು ಮಾರಾಟ ಮಾಡುತ್ತಿದ್ದರು. ಮೂರು ತಿಂಗಳು ಎಲ್ಲವೂ ಸರಿಯಾಗೇ ನಡೆದಿತ್ತು. ದಿನಕ್ಕೆ 150 ರಷ್ಟು ಬಿರ್ಯಾನಿ ವ್ಯಾಪಾರವಾಗುತ್ತಿತ್ತು. ಆದರೆ, ಕಳೆದ ವಾರದಿಂದ ಸಮಸ್ಯೆ ಶುರುವಾಗಿದೆ.
ಸುತ್ತಲಿನ ಕೆಲ ಸ್ಥಳೀಯ ಡಾಬಾ ವ್ಯಾಪಾರಿಗಳು ಲೈಂಗಿಕ ಕಿರುಕುಳ ನೀಡಲಾರಂಭಿಸಿದರು. ಹಲವು ತೊಂದರೆ ನೀಡಿ ವ್ಯಾಪಾರ ಬಂದ್ ಮಾಡಿಸುವ ಹಂತಕ್ಕೆ ತಲುಪಿದ್ದರು. ಈಗ ದಿನಕ್ಕೆ 20 ಪ್ಲೇಟ್ ಬಿರ್ಯಾನಿ ವ್ಯಾಪಾರವಾಗುವುದೂ ಕಷ್ಟವಾಗಿದೆ. ಪೊಲೀಸರ ಬಳಿ ಹೋದರೂ ಇದಕ್ಕೆ ಸ್ಪಂದನೆ ಸಿಕ್ಕಿಲ್ಲ ಎಂದು ಸಜನಾ ಫೇಸ್ ಬುಕ್ ನಲ್ಲಿ ಹರಿಬಿಟ್ಟ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಸಜನಾ ಬೆಂಬಲಕ್ಕೆ ನೆಟ್ಟಿಗರು ಬಂದಿದ್ದಾರೆ. ವಿಡಿಯೋ ಫೇಸ್ ಬುಕ್ ನಲ್ಲಿ ವೈರಲ್ ಆಗುತ್ತಿದ್ದಂತೆ ಮಲೆಯಾಳಿ ನಟ ಜಯಸೂರ್ಯಾ ಸಜನಾ ಬೆಂಬಲಿಸಿದ್ದಾರೆ. ಸ್ವಂತ ಡಾಬಾ ಹಾಕಿಕೊಡುವುದಾಗಿ ಭರವಸೆ ನೀಡಿದ್ದಾರೆ. ಕೇರಳ ಆರೋಗ್ಯ ಸಚಿವೆ ಶೈಲಜಾ ಟೀಚರ್ ಸಜನಾ ಜತೆ ಮಾತನಾಡಿದ್ದಾರೆ. ನಂತರ ಸಚಿವರು ಟ್ವೀಟ್ ಮಾಡಿದ್ದು, ಕೇರಳದಲ್ಲಿ ಅಂಥ ಗೂಂಡಾಗಿರಿ ನಡೆಯದು. ನಾನು ಪೊಲೀಸ್ ಇಲಾಖೆಗೆ ಮಾತನಾಡಿ ಸಜನಾ ಹಾಗೂ ತಂಡಕ್ಕೆ ರಕ್ಷಣೆ ನೀಡುವಂತೆ ಸೂಚಿಸುತ್ತೇನೆ ಎಂದಿದ್ದಾರೆ. ಈ ನಡುವೆ ವಿಡಿಯೋ ಪ್ರಭಾವದಿಂದ ಬಿರ್ಯಾನಿ ಅಂಗಡಿಗೆ ಬರುವವರ ಸಂಖ್ಯೆಯೂ ಹೆಚ್ಚಿದೆ.