ನಭಕ್ಕೆ ಜಿಗಿದ ಚಿಕನ್ ಎಂದರೆ ದರ ಜಾಸ್ತಿಯಾಗಿದೆ ಎಂದರ್ಥವಲ್ಲ. ಅಕ್ಷರಶಃ ಚಿಕನ್ ತುಂಡೊಂದನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಮಂಗ, ಮನುಷ್ಯ ಗಗನಯಾನ ಮಾಡಿದ್ದಾಯಿತು. ಇನ್ನೀಗ ಚಿಕನ್ ಸರದಿ. ಸ್ಪೇಸ್ ಎಕ್ಸ್ ಸಂಸ್ಥೆಯ ಸಿಇಒ ಎಲನ್ ಮಸ್ಕ್ ಅವರು ಚಿಕನ್ ನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.
ಹೌದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬಹುಉಪಯೋಗಿ ಉಪಗ್ರಹ, ಗಗನನೌಕೆಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದರಲ್ಲಿ ಸದಾ ಮಗ್ನರಾಗಿರುವ ಎಲನ್ ಮಸ್ಕ್, ಈ ಬಾರಿ ಐಸ್ ಲ್ಯಾಂಡ್ ನ ಚಿಕನ್ ತುಂಡೊಂದನ್ನು ನಭಕ್ಕೆ ಹಾರಿಸಿದ್ದಾರೆ.
ಸೂಪರ್ ಮಾರ್ಕೆಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಐಸ್ ಲ್ಯಾಂಡ್, ತನ್ನ ಸುವರ್ಣ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಈ ಸಾಹಸಕ್ಕೆ ಕೈ ಹಾಕಿದೆ.
ಐಸ್ ಲ್ಯಾಂಡ್ ನ ಪ್ರಧಾನ ಕಚೇರಿ ಇರುವ ನಾರ್ತ್ ವೇಲ್ಸ್ ಬಳಿಯಿಂದ ಚಿಕನ್ ತುಂಡನ್ನು ಕಳುಹಿಸಿದ್ದು, 1.45 ಗಂಟೆ ಪ್ರಯಾಣಿಸಿ 1.10 ಲಕ್ಷ ಅಡಿ ಎತ್ತರಕ್ಕೆ ಡೆಲಿವರಿ ಮಾಡಿ ವಾಪಸ್ ತರಲಾಯಿತು. ಗಂಟೆಗೆ 200 ಕಿ.ಮೀ. ವೇಗದಲ್ಲಿ ಹಿಂದಿರುಗಿ, ಭೂಮಿಗಿಂತ 19 ಕಿ.ಮೀ. ಎತ್ತರದಲ್ಲೇ ಪ್ಯಾರಾಚ್ಯೂಟ್ ತೆರೆದುಕೊಂಡು ಹಗುರವಾಗಿ ಲ್ಯಾಂಡಿಂಗ್ ಆಯಿತು.