ರೇಷನ್ ಕಾರ್ಡ್, ಕೇಂದ್ರ ಸರ್ಕಾರ ಮಾನ್ಯತೆ ಪಡೆದ ಸರ್ಕಾರಿ ದಾಖಲೆಯಾಗಿದೆ. ಪಡಿತರ ಚೀಟಿಯ ಸಹಾಯದಿಂದ ನ್ಯಾಯಯುತ ಬೆಲೆ ಅಂಗಡಿಗಳಿಂದ ಆಹಾರ ಧಾನ್ಯಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಪಡಿತರ ಚೀಟಿ ಮಾಡುವಾಗ ತಪ್ಪಾದ ಮಾಹಿತಿಯನ್ನು ನೀಡಿದರೆ, ನಿಮ್ಮ ಪಡಿತರ ಚೀಟಿ ರದ್ದಾಗಬಹುದು. ಪಡಿತರ ಚೀಟಿಗೆ ಸಂಬಂಧಿಸಿದ ಕೆಲ ಮಾಹಿತಿಗಳು ಇಲ್ಲಿವೆ.
ಪಡಿತರ ಚೀಟಿ ತಯಾರಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಹೊಸ ಪಡಿತರ ಚೀಟಿಗಳನ್ನು ತಯಾರಿಸುವುದರಿಂದ ಹಿಡಿದು ಹೆಸರುಗಳನ್ನು ತೆಗೆದು ಹಾಕುವವರೆಗೆ ಎಲ್ಲ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಆಹಾರ ಮತ್ತು ಸರಬರಾಜು ಇಲಾಖೆ ನಿರ್ವಹಿಸುತ್ತದೆ. ಪ್ರತಿ ರಾಜ್ಯವೂ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ತನ್ನದೆ ನಿಯಮವನ್ನು ಪಾಲಿಸುತ್ತವೆ. ಪ್ರತಿ ರಾಜ್ಯದಲ್ಲಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ವಿಭಿನ್ನವಾಗಿದೆ.
ಕೆಲ ರಾಜ್ಯಗಳಲ್ಲಿ ರೇಷನ್ ಕಾರ್ಡ್ ಗೆ ಹಣ ಪಡೆಯುತ್ತಾರೆ. ವಿವಿಧ ವರ್ಗದ ಮೇಲೂ ಇದು ಅವಲಂಬಿತವಾಗಿರುತ್ತದೆ. ರೇಷನ್ ಕಾರ್ಡ್ ಪಡೆಯಲು 5ರಿಂದ 45 ರೂಪಾಯಿವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ. ರೇಷನ್ ಕಾರ್ಡ್ ಎಲ್ಲ ಪ್ರಕ್ರಿಯೆ ಮುಗಿದ 30 ದಿನಗಳ ನಂತ್ರ ಕಾರ್ಡ್ ಜನರ ಕೈ ಸೇರುತ್ತದೆ.
ಆಧಾರ್ ಕಾರ್ಡ್, ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆ, ಮತದಾರರ ಚೀಟಿ, ಪಾಸ್ಪೋರ್ಟ್, ಐಡಿ ಪ್ರೂಫ್ ಆಗಿ ಸರ್ಕಾರ ನೀಡಿರುವ ಯಾವುದೇ ಐ ಕಾರ್ಡ್, ಹೆಲ್ತ್ ಕಾರ್ಡ್, ಚಾಲನಾ ಪರವಾನಗಿಯನ್ನು ದಾಖಲೆ ರೂಪದಲ್ಲಿ ನೀಡಬೇಕು. ಪಾನ್ ಕಾರ್ಡ್, ಪಾಸ್ಪೋರ್ಟ್ ಗಾತ್ರದ ಫೋಟೋ, ಆದಾಯ ಪ್ರಮಾಣಪತ್ರ, ವಿಳಾಸದ ಪುರಾವೆಯಾಗಿ ವಿದ್ಯುತ್ ಬಿಲ್, ಗ್ಯಾಸ್ ಸಂಪರ್ಕ ಪುಸ್ತಕ, ದೂರವಾಣಿ ಬಿಲ್, ಬ್ಯಾಂಕ್ ಸ್ಟೇಟ್‌ಮೆಂಟ್ ಅಥವಾ ಪಾಸ್‌ಬುಕ್ ನೀಡಬೇಕು. ಪಡಿತರ ಚೀಟಿ ತಯಾರಿಸುವ ವೇಳೆ ತಪ್ಪು ಮಾಹಿತಿ ನೀಡಿದ್ರೆ ದಂಡ ಹಾಗೂ ಐದು ವರ್ಷಗಳವರೆಗೆ ಜೈಲು ಶಿಕ್ಷೆಯಾಗುತ್ತದೆ.
ಭಾರತೀಯ ಪ್ರಜೆಯಾದವರು ರೇಷನ್ ಕಾರ್ಡ್ ಮಾಡಿಸಬಹುದು. 18 ವರ್ಷದ ಮೇಲ್ಪಟ್ಟಿರಬೇಕು. ಅದಕ್ಕಿಂತ ಚಿಕ್ಕವರನ್ನು ಪಾಲಕರ ಕಾರ್ಡಿನಲ್ಲಿ ಸೇರಿಸಲಾಗುವುದು. ಕುಟುಂಬದ ಮುಖ್ಯ ಸದಸ್ಯನ ಹೆಸರಿನಲ್ಲಿ ಕಾರ್ಡ್ ಇರುತ್ತದೆ.