ಫ್ರೀಜರ್ನಲ್ಲಿ ಸಿಲುಕಿದ್ದ 74 ವರ್ಷದ ವೃದ್ಧನನ್ನ ರಕ್ಷಿಸಿದ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ವೃದ್ಧನನ್ನ ಕುಟುಂಬಸ್ಥರು ಮನೆಗೆ ಕರೆದುಕೊಂಡು ಹೋಗಿದ್ರು. ಇದಾದ ಬಳಿಕ ಆ ವೃದ್ಧ ಫ್ರೀಜರ್ನಲ್ಲಿ ಸಿಲುಕಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿದೆ .
ಫ್ರೀಜರ್ನಲ್ಲಿ ಇದ್ದ ವ್ಯಕ್ತಿಯನ್ನ ಬಾಲಸುಬ್ರಹ್ಮಣ್ಯ ಕುಮಾರ್ ಎಂದು ಗುರುತಿಸಲಾಗಿದೆ. ಫ್ರೀಜರ್ನಿಂದ ರಕ್ಷಿಸಿದ ಬಳಿಕ ಬಾಲಸುಬ್ರಹ್ಮಣ್ಯಂರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲ ದಿನಗಳ ಹಿಂದಷ್ಟೆ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಬಾಲಸುಬ್ರಹ್ಮಣ್ಯಂರನ್ನ ಅವರ ಸಹೋದರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಹೋಗಿದ್ದರು. ಇದೇ ವೇಳೆ ಆ ಸಹೋದರ ಫ್ರೀಜರ್ ಬಾಕ್ಸ್ನ್ನ ಕೇಳಿದ್ದರು. ಹೀಗಾಗಿ ವೃದ್ಧನ ಮನೆಯವರು ಅವರ ಸಾವಿಗೆ ಕಾಯುತ್ತಿದ್ದರಾ ಎಂಬ ಅನುಮಾನ ಹುಟ್ಟುಹಾಕಿದೆ.
ಏಜೆನ್ಸಿ ಒಂದರಿಂದ ಫ್ರೀಜರ್ ಬಾಕ್ಸ್ ಪಡೆದಿದ್ದ ಸಹೋದರ ಬೇಕಂತಲೇ ಆ ವ್ಯಕ್ತಿಯನ್ನ ಫ್ರೀಜರ್ ಒಳಗೆ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಏಜನ್ಸಿ ಸಿಬ್ಬಂದಿ ಫ್ರೀಜರ್ನ್ನ ವಾಪಸ್ ತೆಗೆದುಕೊಂಡು ಹೋಗಲು ಮನೆಗೆ ಬಂದ ವೇಳೆ ಪೆಟ್ಟಿಗೆಯೊಳಗೆ ವೃದ್ಧ ಉಸಿರಾಡ್ತಾ ಇದ್ದ ಅಂಶ ಬಯಲಾಗಿದೆ. ಇನ್ನು ಈ ಸಂಬಂಧ ಕುಟುಂಬಸ್ಥರ ವಿರುದ್ಧ ಪೊಲೀಸರು ನಿರ್ಲಕ್ಷ್ಯದ ನಡುವಳಿಕೆ ಹಾಗೂ ಜೀವಕ್ಕೆ ಅಪಾಯ ತಂದೊಡ್ಡಿದ್ದ ಕಾರಣದಡಿ ಪ್ರಕರಣ ದಾಖಲಿಸಿದ್ದಾರೆ.