ಕೊರೊನಾ ವೈರಸ್ ಮಧ್ಯೆಯೇ ದೇಶ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ 7 ತಿಂಗಳಿಂದ ಸಂಪೂರ್ಣ ಬಂದ್ ಆಗಿದ್ದ ಸಿನಿಮಾ ಹಾಲ್, ಶಾಲೆ, ಮನರಂಜನಾ ಮಲ್ಟಿಪ್ಲೆಕ್ಸ್ ಗಳು, ಮನರಂಜನಾ ಉದ್ಯಾನವನಗಳು, ಈಜುಕೊಳಗಳು ಮತ್ತೆ ಓಪನ್ ಆಗ್ತಿವೆ. ಅಕ್ಟೋಬರ್ 15ರಿಂದ ಕೊರೊನಾ ಪೀಡಿತವಲ್ಲದ ಪ್ರದೇಶಗಳಲ್ಲಿ ಇವುಗಳನ್ನು ಶುರು ಮಾಡಲು ಸರ್ಕಾರ ಅನುಮತಿ ನೀಡಿದೆ.
9ನೇ ತರಗತಿಯಿಂದ 12ನೇ ತರಗತಿವರೆಗೆ ಕ್ಲಾಸ್ ಶುರು ಮಾಡುವಂತೆ ಅನ್ಲಾಕ್ 4ರಲ್ಲೇ ಅನುಮತಿ ನೀಡಲಾಗಿತ್ತು. ಸೆಪ್ಟೆಂಬರ್ 21ರಿಂದಲೇ ಕೆಲ ತರಗತಿಗಳು ಶುರುವಾಗಿವೆ. ಆದ್ರೆ ಸಂಪೂರ್ಣ ಶಾಲೆ ಶುರು ಮಾಡಲು ಕೇಂದ್ರ ಅನ್ಲಾಕ್ 5ರಲ್ಲಿ ಅನುಮತಿ ನೀಡಿದೆ. ಕೆಲ ಷರತ್ತಿನೊಂದಿಗೆ ಶಾಲೆ ಶುರು ಮಾಡುವ ಒಪ್ಪಿಗೆ ನೀಡಿದೆ. ಆದ್ರೆ ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ಶಾಲೆ ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ಅಕ್ಟೋಬರ್ 19ರಿಂದ ಹಾಗೂ ಪಂಜಾಬ್ ನಲ್ಲಿ ಅಕ್ಟೋಬರ್ 15ರಿಂದ ಶಾಲೆ ಶುರುವಾಗಲಿದೆ.
ಇನ್ನು ಇಷ್ಟು ದಿನ ಮುಚ್ಚಿದ್ದ ಸಿನಿಮಾ ಹಾಲ್ ಗಳು ನಾಳೆಯಿಂದ ತೆರೆಯಲಿವೆ. ಸಾಮಾಜಿಕ ಅಂತರ ಇಲ್ಲಿ ಕಡ್ಡಾಯವಾಗಲಿದೆ. ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿಯಿದೆ. ಒಂದು ಸೀಟ್ ಬಿಟ್ಟು ಇನ್ನೊಂದು ಸೀಟ್ ನಲ್ಲಿ ಪ್ರೇಕ್ಷಕರು ಕುಳಿತುಕೊಳ್ಳಬೇಕು. ಸ್ಯಾನಿಟೈಜರ್, ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಹಾಗೆ ಡಿಜಿಟಲ್ ಪೇಮೆಂಟ್ ನಲ್ಲಿ ಮಾತ್ರ ಟಿಕೆಟ್ ಬುಕ್ ಮಾಡಬೇಕು.
ಮನರಂಜನಾ ಉದ್ಯಾನವನಗಳು ಬಾಗಿಲು ತೆರೆಯಬಹುದು. ಆದ್ರೆ ನಿಗದಿತ ಸಮಯದಲ್ಲಿ ಮಾತ್ರ ತೆಗೆಯಬಹುದು. ಜನರು ಸ್ಪರ್ಶಿಸುವ ಸ್ಥಳಗಳನ್ನು ಆಗಾಗ ಸ್ಯಾನಿಟೈಜರ್ ಮಾಡಬೇಕು. ಹಾಗೆ ಉದ್ಯಾನವನದಲ್ಲಿರುವ ಈಜುಕೊಳ ಮುಚ್ಚಿರಬೇಕು. ಉದ್ಯಾನವನದ ಹೊರಗೆ ಹಾಗೂ ಒಳಗೆ ಭದ್ರತಾ ಸಿಬ್ಬಂದಿ ನೇಮಿಸಬೇಕು. ಕ್ಯೂ ಕಡಿಮೆ ಮಾಡಲು ಹೆಚ್ಚಿನ ಕೌಂಟರ್ ತೆರೆಯಬೇಕು.
ಈಜುಕೊಳಗಳು ಕೂಡ ನಾಳೆಯಿಂದ ತೆರೆಯಲಿವೆ. ಆದ್ರೆ ಇದಕ್ಕೂ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ. ಒಲಂಪಿಕ್ಸ್ ಗಾತ್ರದ ಈಜುಗೊಳದಲ್ಲಿ 20 ಜನರಿಗೆ ಒಮ್ಮೆ ಅವಕಾಶವಿರುತ್ತದೆ. ಈಜುಗಾರರು ಹಾಗೂ ತರಬೇತಿ ಪಡೆಯುವವರು ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ.