ಬೆಂಗಳೂರು: ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಒಂದೂವರೆ ವರ್ಷವಾದರೂ ರೇಷನ್ ಕಾರ್ಡ್ ಕೊಟ್ಟಿಲ್ಲ. ಅರ್ಜಿ ಸಲ್ಲಿಕೆ ಮಾಡಿದವರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉಚಿತವಾಗಿ ಆಹಾರ ನೀಡಲಾಗಿತ್ತು. ಈಗ ಪಡಿತರ ಸಿಗದೆ ಅರ್ಜಿ ಸಲ್ಲಿಸಿದ 1.42 ಲಕ್ಷ ಕುಟುಂಬದವರು ಪರದಾಟ ನಡೆಸುವಂತಾಗಿದೆ ಎನ್ನಲಾಗಿದೆ.
ಕೊರೋನಾ ಮುಗಿದ ನಂತರ ಪಡಿತರ ಚೀಟಿ ವಿತರಿಸುವುದಾಗಿ ಆಹಾರ ಇಲಾಖೆ ಹೇಳಿದ್ದು ಅಲ್ಲಿಯವರೆಗೂ ರೇಷನ್ ಸಿಗದೆ ಅರ್ಜಿದಾರರು ಕಾಯಬೇಕಿದೆ. ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಒಂದೂವರೆ ವರ್ಷ ಕಳೆದರೂ ಅರ್ಜಿದಾರರಿಗೆ ಇದುವರೆಗೂ ಪಡಿತರ ಚೀಟಿ ವಿತರಣೆಯಾಗಿಲ್ಲ.
ಕೊರೋನಾ ಕಾರಣದಿಂದ ಆಹಾರ ಇಲಾಖೆ ಪಡಿತರ ಚೀಟಿ ವಿತರಣೆ ಸ್ಥಗಿತಗೊಳಿಸಿದೆ. ಅರ್ಜಿ ಸಲ್ಲಿಸಿದ ಪ್ರತಿ ಕುಟುಂಬದವರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉಚಿತವಾಗಿ ಆಹಾರಧಾನ್ಯ ವಿತರಿಸಲಾಗಿತ್ತು. ಜೂನ್ ನಿಂದ ಆಹಾರಧಾನ್ಯ ವಿತರಿಸಿಲ್ಲ ಎನ್ನಲಾಗಿದೆ.
ಪಡಿತರ ಚೀಟಿ ಹೊಂದಿದವರು ಎಂದಿನಂತೆ ಪ್ರತಿ ತಿಂಗಳು ಪಡಿತರ ಪಡೆಯುತ್ತಿದ್ದಾರೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಆಹಾರಧಾನ್ಯ ವಿತರಣೆಯಾಗದ ಹಿನ್ನೆಲೆಯಲ್ಲಿ ತೊಂದರೆಯಾಗಿದೆ ಎಂದು ಹೇಳಲಾಗಿದೆ.
ಪಡಿತರ ಚೀಟಿ ವಿತರಿಸಲು ಬಯೋಮೆಟ್ರಿಕ್ ಕಡ್ಡಾಯವಾಗಿದ್ದು ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆ ಮತ್ತೆ ಪಡಿತರ ಚೀಟಿ ವಿತರಿಸಲಾಗುವುದು. ಅರ್ಜಿ ಸಲ್ಲಿಕೆ ಮಾಡಿದವರು ಆತಂಕಕ್ಕೆ ಒಳಗಾಗಬಾರದು ಎಂದು ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.