ಮಂಗಳವಾರದಂದು ದುಬೈನಲ್ಲಿ ನಡೆದ ಐಪಿಎಲ್ ನ 29ನೇ ಪಂದ್ಯದಲ್ಲಿ ನಾಯಕ ಎಂ.ಎಸ್. ಧೋನಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ಕಿಂಗ್ಸ್ ತಂಡ ಆರಂಭದಲ್ಲಿ ಫಾಫ್ ಡುಪ್ಲೆಸಿಸ್ ಶೂನ್ಯ ರನ್ ಗೆ ಸಂದೀಪ್ ಶರ್ಮ ಬೌಲಿಂಗ್ನಲ್ಲಿ ಔಟಾದರು.
ಆರಂಭಿಕ ಆಟಗಾರ ಸ್ಯಾಮ್ ಕರನ್ 31ರನ್ ಗಳಿಸಿದ್ದು ಸಂದೀಪ್ ಶರ್ಮ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಅಂಬಟಿ ರಾಯ್ಡು 41ರನ್ ಗಳಿಸಿ ಔಟಾದರು. ಶೇನ್ ವಾಟ್ಸನ್ 42ರನ್ ಗಳಿಸಿದ್ದು ನಟರಾಜನ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಎಂಎಸ್ ಧೋನಿ 21ರನ್ ಗಳಿಸಿ ನಟರಾಜನ್ ಬೌಲಿಂಗ್ ನಲ್ಲಿ ಔಟಾದರು. ಕೊನೆ ಹಂತದಲ್ಲಿ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಟ್ಟಾರೆ 6 ವಿಕೆಟ್ ನಷ್ಟಕ್ಕೆ 167ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಸನ್ ರೈಸರ್ಸ್ ತಂಡದಲ್ಲಿ ಆರಂಭಿಕ ಆಟಗಾರ ನಾಯಕ ಡೇವಿಡ್ ವಾರ್ನರ್ 9ರನ್ ಗಳಿಸಿ ಸ್ಯಾಮ್ ಕರನ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಮನೀಶ್ ಪಾಂಡೆ 4ರನ್ ಗಳಿಸಿ ರನ್ ಔಟ್ ಆದರು. ಜಾನಿ ಬೈರ್ ಸ್ಟೋವ್ 23 ರನ್ ಗಳಿಸಿದ್ದು, ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಔಟಾದರು. ನಂತರ ಕೇನ್ ವಿಲಿಯಮ್ಸನ್ ತಂಡದ ಗೆಲುವಿಗಾಗಿ ಹೋರಾಡಿದ್ದು, 39 ಎಸೆತಗಳಲ್ಲಿ 57ರನ್ ಗಳಿಸುವ ಮೂಲಕ ಕರಣ್ ಶರ್ಮ ಬೌಲಿಂಗ್ನಲ್ಲಿ ಔಟಾದರು. ಸನ್ ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್ ನಷ್ಟಕ್ಕೆ 147ರನ್ ಗಳಿಸಿ ಗುರಿ ತಲುಪುವಲ್ಲಿ ವಿಫಲವಾಯಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ 20 ರನ್ ಗಳಿಂದ ರೋಚಕ ಜಯ ಸಾಧಿಸಿತು.