ಕಳೆದ ಕೆಲವು ದಿನಗಳಿಂದ ಆತಂಕದಲ್ಲೇ ಕಾಲ ಕಳೆಯುತ್ತಿದ್ದ ಮಾಜಿ ಶಾಸಕ ಮುನಿರತ್ನಗೆ ಒಂದೇ ದಿನ ಎರಡು ಖುಷಿ ಸಿಕ್ಕಿದೆ. ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಎಸಗಿದ್ದರೆಂಬ ಪ್ರಕರಣಲ್ಲಿ ಸುಪ್ರೀಂ ಕೋರ್ಟ್ ಅರ್ಜಿದಾರ ತುಳಸಿ ಮುನಿರಾಜು ಗೌಡ ಅವರ ಅರ್ಜಿ ವಜಾ ಮಾಡಿರುವ ಕಾರಣ ಮುನಿರತ್ನಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜೊತೆಗೆ ಅಂದೇ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ.
ಶಾಸಕರಾಗಿದ್ದ ಮುನಿರತ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾರಣ ಈ ಹಿಂದೆ ಕೆಲ ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಂತೆ ಆರ್.ಆರ್. ನಗರಕ್ಕೂ ಉಪ ಚುನಾವಣೆ ನಡೆಯಲಿದೆ ಎನ್ನಲಾಗಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಎದುರಾಳಿಯಾಗಿದ್ದ ತುಳಸಿ ಮುನಿರಾಜು ಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದ ಕಾರಣ ಉಪ ಚುನಾವಣೆ ನಡೆದಿರಲಿಲ್ಲ.
ಆ ಬಳಿಕ ಅರ್ಜಿ ಹೈಕೋರ್ಟ್ ನಲ್ಲಿ ಇತ್ಯರ್ಥಗೊಂಡಿದ್ದು, ಆದರೆ ತುಳಸಿ ಮುನಿರಾಜು ಗೌಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕಾರಣ ಈಗ ನಿಗದಿಯಾಗಿದ್ದ ಉಪ ಚುನಾವಣೆ, ನಿಗದಿತ ದಿನಾಂಕದಂದು ನಡೆಯಲಿದೆಯೋ ಇಲ್ಲವೋ ಎಂಬ ಮತ್ತೊಂದು ಆತಂಕ ಮನೆ ಮಾಡಿತ್ತು. ಜೊತೆಗೆ ಬಿಜೆಪಿ ಹೈಕಮಾಂಡ್ ತುಳಸಿ ಮುನಿರಾಜು ಗೌಡ ಅವರನ್ನೇ ಅಭ್ಯರ್ಥಿಯನ್ನಾಗಿಸಲಿದೆ ಎನ್ನಲಾಗಿತ್ತು. ಆದರೆ ಒಂದೇ ದಿನ ಈ ಎರಡೂ ವಿಷಯಗಳು ಬಗೆಹರಿದಿದ್ದು, ಅಂತಿಮವಾಗಿ ಮುನಿರತ್ನ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.