ನವದೆಹಲಿ: ಜನನ ಮತ್ತು ಮರಣ ನೋಂದಣಿಗೆ ಆಧಾರ್ ಒದಗಿಸುವುದು ಕಡ್ಡಾಯವಲ್ಲ ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.
ಸ್ವಯಂಪ್ರೇರಣೆಯಿಂದ ಆಧಾರ್ ಒದಗಿಸಿದರೆ, ಅದನ್ನು ಯಾವುದೇ ದಾಖಲೆಯಲ್ಲಿ ಮುದ್ರಿಸಬಾರದು ಎಂದು ಆರ್‌ಟಿಐಗೆ ನೀಡಿದ ಉತ್ತರದಲ್ಲಿ ಆರ್ಜಿಐ ತಿಳಿ6ಸಿದೆ. ವಿಶಾಖಪಟ್ಟಣಂ ಮೂಲದ ವಕೀಲ ಎಂ.ವಿ.ಎಸ್. ಅನಿಲ್ ಕುಮಾರ್, ಮರಣದ ನೋಂದಣಿಗೆ ಆಧಾರ್ ಕಡ್ಡಾಯವೇ ಅಥವಾ ಇಲ್ಲವೇ ಎಂದು ಕೇಳಿ ಆರ್‌ಟಿಐ ಮನವಿ ಸಲ್ಲಿಸಿದ್ದರು. ಕಳೆದ ವಾರ ಟ್ವಿಟರ್‌ನಲ್ಲಿ ಈ ಬಗ್ಗೆ ಉತ್ತರ ನೀಡಲಾಗಿದೆ. ಜನನ ಮತ್ತು ಮರಣದ ನೋಂದಣಿಗೆ ಆಧಾರ್ ಸಂಖ್ಯೆಯ ಅವಶ್ಯಕತೆ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸತ್ತವರ ಗುರುತಿಗಾಗಿ ಆಧಾರ್ ನೀಡಬೇಕೆಂದು ಆರ್.ಜಿ.ಐ. 2017ರಲ್ಲಿ ಹೇಳಿತ್ತು. ಆದ್ರೆ 2018ರಲ್ಲಿ ಸುಪ್ರೀಂ ಕೋರ್ಟ್ ಇದಕ್ಕೆ ವಿರುದ್ಧ ತೀರ್ಪು ನೀಡಿತ್ತು. ಇದಾದ ನಂತರ 2019ರಲ್ಲಿ ಆರ್.ಜಿ.ಐ. ಎಲ್ಲ ರಾಜ್ಯಗಳಿಗೆ ಸುತ್ತೋಲೆ ಕಳಿಸಿತ್ತು. ಸ್ಥಳೀಯ ನೋಂದಣಿ ಅಧಿಕಾರಿಗಳು ಆಧಾರ್ ಕಡ್ಡಾಯವೆಂದು ಒತ್ತಾಯಿಸುವಂತಿಲ್ಲ. ಸ್ವಯಂಪ್ರೇರಿತರಾಗಿ ಆಧಾರ್ ನೀಡಿದ್ರೆ ಸ್ವೀಕರಿಸಬಹುದು. ಆದ್ರೆ ಆಧಾರ್ ಸಂಖ್ಯೆಯ ಮೊದಲ ಎಂಟು ಅಂಕೆಗಳನ್ನು ಕಪ್ಪು ಶಾಯಿಯಿಂದ ಅಳಿಸಬೇಕು. ಆಧಾರ್ ನ ಎಲ್ಲ ಸಂಖ್ಯೆಯನ್ನು ಜನನ ಮತ್ತು ಮರಣದ ಯಾವುದೇ ದಾಖಲೆಯಲ್ಲಿ ಸಂಗ್ರಹಿಸಬಾರದು ಎಂದು ಹೇಳಲಾಗಿತ್ತು.