ನವದೆಹಲಿ: ಕೊರೊನಾದಿಂದ ಸಂಭವಿಸಿದ ಸಾವಿನ ಅಂಕಿ ಅಂಶಗಳ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಪ್ರಮುಖ ಮಾಹಿತಿ ನೀಡಿದೆ.
ಕೊರೊನಾ ಸೋಂಕಿನಿಂದ ಮೃತಪಟ್ಟವರಲ್ಲಿ ಶೇಕಡ 70 ರಷ್ಟು ಪುರುಷರಾಗಿದ್ದು, ಶೇಕಡ 30 ರಷ್ಟು ಮಹಿಳೆಯರು ಮೃತಪಟ್ಟಿದ್ದಾರೆ. ಸಾವನ್ನಪ್ಪಿದವರಲ್ಲಿ ಶೇಕಡ 53 ರಷ್ಟು ರೋಗಿಗಳು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ.
ಶೇಕಡ 35 ರಷ್ಟು 45 ರಿಂದ 60 ವರ್ಷ ವಯಸ್ಸಿನವರು ಮೃತಪಟ್ಟಿದ್ದಾರೆ. ಶೇಕಡ 10ರಷ್ಟು 26 ರಿಂದ 44 ವರ್ಷ ವಯಸ್ಸಿನವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ದೇಶದಲ್ಲಿ ಈವರೆಗೆ ಕೊರೊನಾ ಕಾರಣದಿಂದ 1,09,856 ಮಂದಿ ಮೃತಪಟ್ಟಿದ್ದು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ 51,632 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ 58,223 ಜನ 60 ವರ್ಷಕ್ಕಿಂತ ಮೇಲ್ಪಟ್ಟವರು ಎನ್ನುವುದು ಗೊತ್ತಾಗಿದೆ.
ಇನ್ನು 17 ವರ್ಷದೊಳಗಿನ ಶೇಕಡ 1ರಷ್ಟು, 18 ರಿಂದ 25 ವರ್ಷದೊಳಗಿನ ಶೇಕಡ 1ರಷ್ಟು ಮಂದಿ ಸಾವನ್ನಪ್ಪಿದ್ದಾರೆ. 26 ರಿಂದ 44 ವರ್ಷ ವಯಸ್ಸಿನ ಶೇಕಡ 10 ರಷ್ಟು ಮಂದಿ ಮೃತಪಟ್ಟಿದ್ದಾರೆ. ಇದು ಕೊರೊನಾ ಎಷ್ಟು ಮಾರಕವಾಗಿದೆ ಎನ್ನುವುದನ್ನು ಬಿಂಬಿಸುತ್ತದೆ. ಮೊದಲೇ ಕಾಯಿಲೆ ಇದ್ದವರಿಗೆ ಕೊರೊನಾ ಸೋಂಕು ಗಂಭೀರ ಪರಿಣಾಮ ಉಂಟುಮಾಡಿದೆ ಎಂದು ಹೇಳಲಾಗಿದೆ.