ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸಾಧಕರ ಜೀವನಾಧಾರಿತ ಸಿನಿಮಾಗಳು ಹೆಚ್ಚಾಗಿ ತೆರೆಗೆ ಬರುತ್ತಿವೆ. ಅಂತೆಯೇ ಬಹುಭಾಷಾ ನಟಿ ದಿ. ಸೌಂದರ್ಯ ಅವರ ಬಯೋಪಿಕ್ ಕೂಡ ಸಿನಿಮಾ ಆಗಲಿದೆ ಎಂಬ ಸುದ್ದಿ ಟಾಲಿವುಡ್ ನಲ್ಲಿ ಹಲವು ದಿನಗಳಿಂದ ಕೇಳಿಬರುತ್ತಿದೆ. ಇದೀಗ ಬಯೋಪಿಕ್ ಗೆ ಸಿದ್ಧತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದು, ಸೌಂದರ್ಯ ಪಾತ್ರದ ಬಗ್ಗೆ ಈಗ ಅಭಿಮಾನಿಗಳಲ್ಲಿ ಚರ್ಚೆ ಆರಂಭವಾಗಿದೆ.
ನಟಿ ಸೌಂದರ್ಯ ಬಯೋಪಿಕ್ ಮಾಡಲು ಟಾಲಿವುಡ್ ನಲ್ಲಿ ನಿರ್ಮಾಪಕರೊಬ್ಬರು ಮುಂದೆ ಬಂದಿದ್ದು, ಸೌಂದರ್ಯ ಅವರ ಕುಟುಂಬದ ಜೊತೆಯೂ ಹಲವು ಬಾರಿ ಮಾತುಕತೆ ನಡೆಸಿದ್ದಾರಂತೆ. ಸೌಂದರ್ಯ ಕುಟುಂಬದ ಅಂತಿಮ ಒಪ್ಪಿಗಾಗಿ ನಿರ್ಮಾಪಕರು ಕಾಯುತ್ತಿದ್ದಾರಂತೆ.
ಒಂದು ವೇಳೆ ಸೌಂದರ್ಯ ಬಯೋಪಿಕ್ ಮೂಡಿ ಬಂದಲ್ಲಿ ಅದರಲ್ಲಿ ಸೌಂದರ್ಯ ಪಾತ್ರದ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈ ನಡುವೆ ದಕ್ಷಿಣ ಭಾರತದ ಸಹಜ ಸುಂದರಿ ಸಾಯಿ ಪಲ್ಲವಿ ಸೌಂದರ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಸಾಯಿ ಪಲ್ಲವಿ ಅಭಿಮಾನಿಗಳು ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅದ್ಭುತ ನಟನೆ ಮೂಲಕವೇ ದಕ್ಷಿಣ ಭಾರತದ ಸಿನಿ ರಸಿಕರ ಮನಗೆದ್ದಿರುವ ಮಲಯಾಳಂ ನಟಿ ಸಾಯಿ ಪಲ್ಲವಿ ಸೌಂದರ್ಯ ಬಯೋಪಿಕ್ ನಲ್ಲಿ ಅಭಿನಯಿಸಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ.