
ಸೋಶಿಯಲ್ ಮೀಡಿಯಾದಲ್ಲಿ ನಿತ್ಯ ಸಾವಿರಾರು ಸುದ್ದಿಗಳು ಓಡಾಡ್ತಾ ಇರುತ್ತೆ. ಆದರೆ ಇದರಲ್ಲಿ ವೈರಲ್ ಆಗೋ ಸುದ್ದಿಗಳೆಲ್ಲವೂ ಸತ್ಯ ಅಂತಾ ನಂಬೋಕೆ ಬರಲ್ಲ. ಈ ಮಾತಿಗೆ ತಾಜಾ ಉದಾಹರಣೆ ರೋಜಗಾರ್ ಯೋಜನೆ.
ರೋಜಗಾರ್ ಯೋಜನೆ ಮೂಲಕ ಕೇಂದ್ರ ಸರ್ಕಾರ ದೇಶದಲ್ಲಿರುವ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಿದೆ ಎಂಬ ಸುದ್ದಿ ವಾಟ್ಸಾಪ್ ಹಾಗೂ ಫೇಸ್ಬುಕ್ಗಳಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಈ ಸುದ್ದಿ ಸುಳ್ಳು ಎಂಬ ಅಂಶ ಬಯಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಮೇಸೇಜ್ನಲ್ಲಿ ನಿರುದ್ಯೋಗಿಗಳಿಗೆ ನಿತ್ಯ 1000-2000 ರೂ.ವರೆಗೆ ಸಂಪಾದಿಸಬಹುದಾದ ಕೆಲಸ ನೀಡಲಾಗುತ್ತೆ. ಮನೆಯಲ್ಲೇ ಕೂತು ಈ ಯೋಜನೆಯಡಿ ನೀವು ಕೆಲಸ ಮಾಡಬಹುದು. ಈ ಕೆಲಸಕ್ಕೆ ಆನ್ಲೈನ್ ಅರ್ಜಿ ಸಲ್ಲಿಸಬೇಕು. ಹಾಗೂ ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನಾಂಕ ಅಂತಾನೂ ಹೇಳಲಾಗಿತ್ತು.
ಆದರೆ ಸರ್ಕಾರ ಈ ರೀತಿಯ ಯಾವುದೇ ಘೋಷಣೆಗಳನ್ನ ಮಾಡಿಲ್ಲ. ಸಾಮಾಜಿಕ ಜಾಲತಾಣ ನೀಡಿರೋ ಈ ಮಾಹಿತಿ ಸಂಪೂರ್ಣ ಸುಳ್ಳು ಎಂಬ ಅಂಶ ಇದೀಗ ಬಯಲಾಗಿದೆ.