ನವದೆಹಲಿ: ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಕುಸಿದ ಆರ್ಥಿಕತೆಗೆ ಚೈತನ್ಯ ನೀಡಲು ಕೇಂದ್ರ ಸರ್ಕಾರ 73 ಸಾವಿರ ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದೆ.
ಸರ್ಕಾರಿ ನೌಕರರಿಗೆ ರಜೆ ಪ್ರವಾಸ ಭತ್ಯೆ ಬದಲಾಗಿ ನಗದು ಪಾವತಿ, ಬಡ್ಡಿರಹಿತವಾಗಿ 10 ಸಾವಿರ ರೂಪಾಯಿ ಮುಂಗಡ ಸಾಲ, ಮೂಲಸೌಕರ್ಯಕ್ಕೆ ಹೆಚ್ಚುವರಿಯಾಗಿ 25 ಸಾವಿರ ಕೋಟಿ ರೂ., ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿರಹಿತವಾಗಿ 12 ಸಾವಿರ ಕೋಟಿ ರೂಪಾಯಿ ಸಾಲ ನೀಡಲಾಗುವುದು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 73 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬಕ್ಕೆ 10 ಸಾವಿರ ರೂಪಾಯಿ ಮುಂಗಡ ನೀಡಲು ಹಣ ಕಾಯ್ದಿರಿಸಲಾಗಿದೆ. ಪ್ರೀ ಲೋಡೆಡ್ ರುಪೇ ಕಾರ್ಡ್ ಮೂಲಕ ಇದನ್ನು ನೀಡಲಾಗುತ್ತದೆ.
ಇದರೊಂದಿಗೆ ಕೇಂದ್ರ ಸರ್ಕಾರಿ ನೌಕರರಿಗೆ 4 ವರ್ಷಗಳಿಗೊಮ್ಮೆ ರಜಾಕಾಲದ ಪ್ರಯಾಣ ಭತ್ಯೆ(ಎಲ್.ಟಿ.ಸಿ.) ಸಿಗುತ್ತದೆ. ಈ ಬಾರಿ ನಗದು ವೋಚರ್ ಕೊಡಲಾಗುವುದು. ಇನ್ನು 2020 ರ ಕೇಂದ್ರ ಬಜೆಟ್ ನಲ್ಲಿ ಬಂಡವಾಳ ವೆಚ್ಚಕ್ಕಾಗಿ ನೀಡಲಾದ 4.13 ಲಕ್ಷ ಕೋಟಿ ರೂ.ಗೆ ಹೆಚ್ಚುವರಿಯಾಗಿ 25 ಸಾವಿರ ಕೋಟಿ ರೂಪಾಯಿ ನೀಡಲಾಗುವುದು. ಮೂಲಸೌಕರ್ಯ, ಆಸ್ತಿ ಸೃಷ್ಟಿಗೆ ಖರ್ಚು ಮಾಡುವುದರಿಂದ ಆರ್ಥಿಕತೆ ಸುಧಾರಿಸುತ್ತದೆ ಎಂಬ ಉದ್ದೇಶದಿಂದ ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕಾಗಿ 12 ಸಾವಿರ ಕೋಟಿ ರೂಪಾಯಿ ಬಡ್ಡಿ ರಹಿತ ವಿಶೇಷ ಸಾಲ ಪ್ರಕಟಿಸಲಾಗಿದೆ.