ಲಖ್ನೋ: ಉತ್ತರಪ್ರದೇಶದ ದೇವಾರಿಯಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ವಿಚಾರ ವಿವಾದಕ್ಕೆ ಕಾರಣವಾಗಿದೆ.
ಅತ್ಯಾಚಾರ ಆರೋಪ ಎದುರಿಸುತ್ತಿರುವ ಮುಕುಂದ್ ಭಾಸ್ಕರ್ ಮಣಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು ಇದನ್ನು ಪ್ರಶ್ನಿಸಿದ ಪಕ್ಷದ ಕಾರ್ಯಕರ್ತೆ ಮೇಲೆ ಆತನ ಬೆಂಬಲಿಗರು ಹಲ್ಲೆ ಮಾಡಿದ್ದಾರೆ.
ಉತ್ತರಪ್ರದೇಶದ ಹತ್ರಾಸ್ ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ಇದೇ ವೇಳೆ ಉಪಚುನಾವಣೆಯಲ್ಲಿ ಅತ್ಯಾಚಾರ ಆರೋಪಕ್ಕೆ ಗುರಿಯಾದ ವ್ಯಕ್ತಿಗೆ ನೀಡಿರುವುದು ಪಕ್ಷದ ಮಹಿಳಾ ಕಾರ್ಯಕರ್ತೆ ಆಕ್ಷೇಪಕ್ಕೆ ಕಾರಣವಾಗಿದೆ.
ದೇವಾರಿಯಾ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕಿ ತಾರಾ ಯಾದವ್ ಅತ್ಯಾಚಾರ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಟಿಕೆಟ್ ನೀಡಿರುವುದು ಪಕ್ಷದ ದಿವಾಳಿತನದ ಸಂಕೇತ. ಬೇರೆಯವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಎಂದು ಹೇಳಿದ್ದಾರೆ.
ಈ ವೇಳೆ ಮುಕುಂದ್ ಭಾಸ್ಕರ್ ಬೆಂಬಲಿಗರು ತಾರಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಸಭೆಯಲ್ಲಿದ್ದ ಕೆಲವರು ಅವರನ್ನು ರಕ್ಷಿಸಿ ಹೊರಗೆ ಕರೆದುಕೊಂಡು ಹೋಗಿದ್ದಾರೆ. ನವೆಂಬರ್ 3 ರಂದು ದೇವಾರಿಯಾ ಕ್ಷೇತ್ರಕ್ಕೆ ಬೈಎಲೆಕ್ಷನ್ ನಡೆಯಲಿದ್ದು ಕಾಂಗ್ರೆಸ್ ಮುಕುಂದ್ ಭಾಸ್ಕರ್ ಗೆ ಟಿಕೆಟ್ ನೀಡಿದೆ.