ಮುಂಬೈ: 2020 -21 ನೇ ಸಾಲಿನ ಏಳನೇ ಕಂತಿನ ಚಿನ್ನದ ಬಾಂಡ್ ಖರೀದಿ ಅಕ್ಟೋಬರ್ 12 ರ ಇಂದಿನಿಂದ ಅಕ್ಟೋಬರ್ 16 ರವರೆಗೆ ನಡೆಯಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತು ಮಾಹಿತಿ ನೀಡಿದ್ದು, ಪ್ರಸಕ್ತ ಆರ್ಥಿಕ ವರ್ಷದ ಏಳನೇ ಕಂತಿನ ಚಿನ್ನದ ಬಾಂಡ್ ಖರೀದಿ ಅಕ್ಟೋಬರ್ 12 ರ ಸೋಮವಾರದಿಂದ ಆರಂಭವಾಗಲಿದ್ದು, ಪ್ರತಿ ಗ್ರಾಂಗೆ 5,051 ರೂಪಾಯಿ ಖರೀದಿ ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.
ಆನ್ಲೈನ್ನಲ್ಲಿ ಬಾಂಡ್ ಖರೀದಿ ಮತ್ತು ನಗದುರಹಿತವಾಗಿ ಡಿಜಿಟಲ್ ಮಾದರಿಯಲ್ಲಿ ಪಾವತಿಸುವವರಿಗೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲಾಗುವುದು. ಆನ್ಲೈನ್ ಹೂಡಿಕೆದಾರರಿಗೆ ಪ್ರತಿ ಗ್ರಾಂಗೆ 5,001 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
2015 ರಲ್ಲಿ ಕೇಂದ್ರ ಸರ್ಕಾರ ಭೌತಿಕ ರೂಪದಲ್ಲಿ ಪ್ರಯೋಜನಕ್ಕೆ ಬಾರದ ಚಿನ್ನವನ್ನು ಬಳಕೆಗೆ ತರಲು ಚಿನ್ನದ ಬಾಂಡ್ ಯೋಜನೆ ಜಾರಿಗೆ ತಂದಿದ್ದು, ಆಯ್ದ ಬ್ಯಾಂಕ್, ಅಂಚೆ ಕಚೇರಿ, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನ್ ಅಫ್ ಇಂಡಿಯಾ ರಾಷ್ಟ್ರೀಯ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಚಿನ್ನದ ಬಾಂಡ್ ಮಾರಾಟ ಮಾಡಲಾಗುತ್ತದೆ.
ವ್ಯಕ್ತಿಯೊಬ್ಬರ ಕನಿಷ್ಟ ಹೂಡಿಕೆ 1 ಗ್ರಾಂ ಹಾಗೂ ಗರಿಷ್ಟ ಹೂಡಿಕೆ 500 ಗ್ರಾಂ ಇದ್ದು, ಹಿಂದೂ ಅವಿಭಕ್ತ ಕುಟುಂಬದ ಖರೀದಿ ಮಿತಿ 4 ಕೆ.ಜಿ. ನಿಗದಿಪಡಿಸಲಾಗಿದೆ.