
ಇಂದು ದುಬೈನಲ್ಲಿ ನಡೆದ ಐಪಿಎಲ್ ನ 26ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭದಲ್ಲಿ ಜಾನಿ ಬೈರ್ ಸ್ಟೋವ್ 16ರನ್ ಗಳಿಸಿ ಕಾರ್ತಿಕ್ ತ್ಯಾಗಿ ಬೌಲಿಂಗ್‌ನಲ್ಲಿ ಔಟಾದರು. ನಂತರ ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ ಉತ್ತಮ ಜೊತೆಯಾಟವಾಡಿದ್ದು, ಆರಂಭಿಕ ಆಟಗಾರ ನಾಯಕ ಡೇವಿಡ್ ವಾರ್ನರ್ 38 ಎಸೆತಗಳಲ್ಲಿ 48 ರನ್ ಗಳಿಸಿದ್ದು ಜೋಪ್ರಾ ಆರ್ಚರ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.
ನಂತರ ಮನೀಶ್ ಪಾಂಡೆ 44 ಎಸೆತಗಳಲ್ಲಿ 54 ರನ್ ಗಳಿಸಿದ್ದು ಜಯ್ದೇವ್ ಉನದ್ಕಟ್ ಬೌಲಿಂಗ್‌ನಲ್ಲಿ ಔಟಾದರು. ಕೊನೆ ಹಂತದಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಪ್ರಿಯಂ ಗರ್ಗ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ಕೊನೆ ಎಸೆತದಲ್ಲಿ ಪ್ರಿಯಂ ಗರ್ಗ್ ರನ್ ಔಟಾಗಿದ್ದು, ಒಟ್ಟಾರೆ ಸನ್ ರೈಸರ್ಸ್ ಹೈದರಾಬಾದ್ ತಂಡ 4 ವಿಕೆಟ್ ನಷ್ಟಕ್ಕೆ 158 ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಬೆನ್ ಸ್ಟೋಕ್ಸ್ 5ರನ್ ಗಳಿಸಿ ಕಲೀಲ್ ಅಹ್ಮದ್ ಬೌಲಿಂಗ್ನಲ್ಲಿ ಔಟಾದರು. ನಂತರ ಬಂದ ನಾಯಕ ಸ್ಟೀವ್ ಸ್ಮಿತ್ 5ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಜೋಸ್ ಬಟ್ಲರ್ ಕೂಡ 16ರನ್ ಗಳಿಸಿದ್ದು ಕಲೀಲ್ ಅಹ್ಮದ್ ಬೌಲಿಂಗ್ನಲ್ಲಿ ಔಟಾದರು.
ಬಳಿಕ ಬಂದ ರಾಬಿನ್ ಉತ್ತಪ್ಪ 18ರನ್ ಗಳಿಸಿ ರಶೀದ್ ಖಾನ್ ಬೌಲಿಂಗ್‌ನಲ್ಲಿ ಔಟಾದರು. ಸಂಜು ಸ್ಯಾಮ್ಸನ್ ಕೂಡ 26ರನ್ ಗಳಿಸಿ ಔಟಾಗಿದ್ದು, ಬಳಿಕ ಬಂದ ರಿಯಾನ್ ಫರಾಗ್ 26 ಎಸೆತಗಳಲ್ಲಿ 42 ಹಾಗೂ ರಾಹುಲ್ ತಿವಾಟಿಯಾ 28 ಎಸೆತಗಳಲ್ಲಿ 45 ರನ್ ಇವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ 5 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿತು.