ತಿರುವನಂತಪುರಂ: ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿ ಅ.16 ರಿಂದ 5 ದಿನಗಳ ಕಾಲ ತೆರೆಯಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಒಂದು ದಿನಕ್ಕೆ 250 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಶಬರಿಮಲೆಗೆ ಬರುವ ಭಕ್ತರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿದ್ದು, ನೀಲಕ್ಕಲ್ ಕ್ಯಾಂಪ್ ನಲ್ಲಿ ರ್ಯಾಪಿಡ್ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತದೆ. ಕೋವಿಡ್ ನೆಗೆಟಿವ್ ಬಂದವರಿಗೆ ಮಾತ್ರ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. 24 ಗಂಟೆಯೊಳಗಿನ ವರದಿಯನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ಕೇರಳ ಸರ್ಕಾರ ತಿಳಿಸಿದೆ.
ದೇವಾಲಯದ ಬಳಿ ಯಾರೂ ಕೂಡ ತಂಗುವಂತಿಲ್ಲ. ಮುಂಜಾಗೃತಾ ಕ್ರಮವಾಗಿ ಕೋವಿಡ್ ಸೋಂಕಿತರಿಗಾಗಿ ಪಂಬಾ ಬಳಿ ಆಸ್ಪತ್ರೆ ವ್ಯವಸ್ಥೆ ಕೂಡ ಮಾಡಲಾಗಿದೆ. ಆದರೆ ಮಾಸ್ಕ್ ಬಗ್ಗೆ ಗೊಂದಲಗಳಿದ್ದು, ಯಾವುದೇ ಸ್ಪಷ್ಟನೆ ನೀಡಿಲ್ಲ. ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಕಡಿದಾದ ಬೆಟ್ಟ ಹತ್ತಿ ಹೋಗಬೇಕಿರುವುದರಿಂದ ಮಾಸ್ಕ್ ಹಾಕಿಕೊಂಡಲ್ಲಿ ಉಸಿರಾಟಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ ಹೀಗಾಗಿ ಮಾಸ್ಕ್ ಧರಿಸಿ ದೇವಾಲಯಕ್ಕೆ ಹೋಗಬೇಕೇ ಬೇಡವೇ ಎಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.