ರಾಜಧಾನಿ ಬೇಂಗಳೂರಿನಲ್ಲಿ ನಕಲಿ ಛಾಪಾ ಕಾಗದ ದಂಧೆಯಲ್ಲಿ ತೊಡಗಿದ್ದ ಛೋಟಾ ತೆಲಗಿ ಸೇರಿದಂತೆ ನಾಲ್ವರನ್ನು ಎಸ್.ಜೆ. ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 443 ನಕಲಿ ಛಾಪಾ ಕಾಗದ ಜಫ್ತಿ ಮಾಡಲಾಗಿದೆ.
ಹುಸೇನ್ ಬಾಬು ಅಲಿಯಾಸ್ ಛೋಟಾ ತೆಲಗಿ, ಸಿಟಿ ಸಿವಿಲ್ ಕೋರ್ಟ್ ಬಳಿ ಟೈಪ್ ರೈಟರ್ ಆಗಿದ್ದ ಹರೀಶ್, ಶವರ್ ಅಲಿಯಾಸ್ ಸೀಮಾ, ಕಂದಾಯ ಭವನ ಟೈಪಿಸ್ಟ್ ನಜ್ಮಾ ಫಾತಿಮಾ ಬಂಧಿತ ಆರೋಪಿಗಳು. ಕೋರ್ಟ್ ಗಳಲ್ಲಿ ಸುಳ್ಳು ದಾಖಲೆಗಳಿಗಾಗಿ ನಕಲಿ ಛಾಪಾ ಕಾಗದ ಸೃಷ್ಟಿ ಮಾಡುತ್ತಿದ್ದ ಇವರಿಗೆ ಸಿಟಿ ಸಿವಿಲ್ ಕೋರ್ಟ್ ಹಾಗೂ ಕಂದಾಯ ಭವನಕ್ಕೆ ಬರುವವರೇ ಟಾರ್ಗೆಟ್ ಆಗಿದ್ದರು.
ಡಿಸಿಪಿ ಅನುಚೇತ್ ಮಾರ್ಗದರ್ಶನದಲ್ಲಿ ಎಸ್.ಜೆ. ಪಾರ್ಕ್ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹುಸೇನ್ ಅಲಿಯಾಸ್ ಛೋಟಾ ತೆಲಗಿಯನ್ನು ಈ ಹಿಂದೆ ಹಲಸೂರು ಗೇಟ್ ಬಳಿ ಪೊಲೀಸರು ಬಂಧಿಸಿದ್ದರಲ್ಲದೇ ಇದೇ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದ. ಆದರೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಈತ ಮತ್ತೆ ದಂಧೆಯಲ್ಲಿ ತೊಡಗಿಕೊಂಡಿದ್ದ.