ಕೊರೊನಾ ಸಂದರ್ಭದಲ್ಲಿ ಪ್ರೇಕ್ಷಕರಿಲ್ಲದೆ ಐಪಿಎಲ್ ಪಂದ್ಯಾವಳಿಗಳನ್ನು ಅಬುದಾಬಿ ಹಾಗೂ ಶಾರ್ಜಾದಲ್ಲಿ ನಡೆಸಲಾಗುತ್ತಿದೆ. ಟಿವಿಯಲ್ಲಿ ನೇರ ಪ್ರಸಾರವಿದ್ದು, ಇದಕ್ಕೆ ಕ್ರೀಡಾ ಪ್ರಿಯರಿಂದ ಅಪಾರ ಸ್ಪಂದನೆ ವ್ಯಕ್ತವಾಗುತ್ತಿದೆ.
ಬಹುತೇಕರು ಟಿವಿಯಲ್ಲಿ ಆಟ ನೋಡಿ ಎಂಜಾಯ್ ಮಾಡುತ್ತಿದ್ದರೆ, ತಾವು ಬೆಂಬಲಿಸಿದ್ದ ತಂಡ ಪರಾಭವಗೊಂಡ ಕಾರಣಕ್ಕೆ ಆ ತಂಡದ ಆಟಗಾರರ ವಿರುದ್ಧ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದರ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪರಾಭವಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಿ. ವಿಜಯ್ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಖಾತೆ ಹೊಂದಿರುವ ವಿಕೃತ ವ್ಯಕ್ತಿಯೊಬ್ಬ ಮಹೇಂದ್ರ ಸಿಂಗ್ ಧೋನಿ ಪುತ್ರಿ ಐದು ವರ್ಷದ ಜೀವಾಳಿಗೆ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಹಾಕಿದ್ದು, ಇದೀಗ ಬೆದರಿಕೆ ಹಾಕಿದ್ದ ವಿಕೃತನ ವಿರುದ್ಧ ಜಾಲತಾಣದಲ್ಲಿ ದೊಡ್ಡ ಮಟ್ಟದ ಖಂಡನೆ ವ್ಯಕ್ತವಾಗುತ್ತಿದೆ.