ನವದೆಹಲಿ: ರೈಲು ಹೊರಡುವ 5 ನಿಮಿಷ ಮೊದಲು ಕೂಡ ಟಿಕೆಟ್ ಬುಕ್ಕಿಂಗ್ ಮಾಡುವ ಹೊಸ ವ್ಯವಸ್ಥೆ ಇಂದಿನಿಂದ ಜಾರಿಗೆ ಬರಲಿದೆ. ಟಿಕೆಟ್ ರದ್ದು ಮಾಡಲು ಕೂಡ ಅವಕಾಶ ನೀಡಲಾಗಿದೆ.
ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಕೊರೋನಾ ಲಾಕ್ ಡೌನ್ ಜಾರಿಯಾಗುವ ಮೊದಲು ರೈಲು ಹೊರಡುವ 30 ನಿಮಿಷ ಮೊದಲಿಗೆ ಟಿಕೆಟ್ ಬುಕ್ ಮಾಡುವ ವ್ಯವಸ್ಥೆ ಇತ್ತು. ನಂತರದಲ್ಲಿ ವಿಶೇಷ ರೈಲುಗಳ ಸಂಚಾರ ಆರಂಭವಾಗಿ ರೈಲು ಹೊರಡುವ 4 ಗಂಟೆಗಳ ಮೊದಲು ಮೊದಲ ಚಾರ್ಟ್ ಸಿದ್ಧಪಡಿಸಲಾಗುತ್ತಿತ್ತು.
ರೈಲು ಹೊರಡುವ 2 ಗಂಟೆ ಮೊದಲು ಎರಡನೇ ಚಾರ್ಟ್ ಸಿದ್ಧಪಡಿಸಲಾಗುತ್ತಿತ್ತು. ಈಗ ಈ ಮೊದಲು ಇದ್ದ ವ್ಯವಸ್ಥೆಯನ್ನೇ ಪುನರಾರಂಭ ಮಾಡಲಾಗುತ್ತಿದೆ. ಮೊದಲ ಚಾರ್ಟನ್ನು ರೈಲು ಸಂಚಾರ ಆರಂಭವಾಗುವ 4 ಗಂಟೆ ಮೊದಲು ಸಿದ್ಧಪಡಿಸಲಿದ್ದು ಸೀಟುಗಳು ಉಳಿದಿದ್ದರೆ ಎರಡನೇ ಚಾರ್ಟನ್ನು ರೈಲು ಹೊರಡುವ 30 ನಿಮಿಷದಿಂದ 5 ನಿಮಿಷದ ನಡುವಿನ ಅವಧಿಯಲ್ಲಿ ಸಿದ್ಧಪಡಿಸಲಾಗುವುದು.
ಇದರಿಂದ ರೈಲು ಹೊರಡುವ 5 ನಿಮಿಷ ಮೊದಲು ಸೀಟು ಖಾಲಿ ಇದ್ದರೆ ಕೌಂಟರ್ನಲ್ಲಿ ಅಥವಾ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ. ಈ ಅವಧಿಯಲ್ಲಿ ಬುಕ್ ಆಗಿರುವ ಟಿಕೆಟ್ ಗಳನ್ನು ರದ್ದು ಮಾಡಲು ಅವಕಾಶವಿದ್ದು ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.