ರಷ್ಯಾದ ಗ್ರೇಟ್ ಮಾರ್ಕೋ ಸ್ಟೇಟ್ ಸರ್ಕಸ್ ಕಂಪನಿಯ ನೌಕರನೊಬ್ಬ ಕರಡಿ ಪಳಗಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಬುಲೀಚ್ (28) ಸಾವಿಗೀಡಾದಾತ. ಇದೇ ಸರ್ಕಸ್ ಕಂಪನಿಯಲ್ಲಿ ಪ್ರಾಣಿಗಳ ಪಂಜರ, ಬೋನು ಇತ್ಯಾದಿಗಳನ್ನು ಶುಚಿಗೊಳಿಸುವ ಕೆಲಸ ಮಾಡಿಕೊಂಡಿದ್ದ.
ಕಂಪನಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದ ಯಾಶ (7) ಎಂಬ ಕರಡಿಯ ಬೋನಿಗೆ ತೆರಳಿ, ಪಳಗಿಸಲು ಹೋದಾಗ, ಕರಡಿ ಕೆರಳಿ ಈತನ ಮೇಲೆ ದಾಳಿ ನಡೆಸಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಆತ ಕೊನೆಯುಸಿರೆಳೆದಿದ್ದಾನೆ.
ಮೃತನ ತಾಯಿ ಎಲೆನಾ (52) ಹೇಳುವ ಪ್ರಕಾರ, ಆತನಿಗೆ ಚಿಕ್ಕವಯಸ್ಸಿನಿಂದಲೂ ಪ್ರಾಣಿಗಳನ್ನು ಪಳಗಿಸುವುದರಲ್ಲಿ ಆಸಕ್ತಿ ಇತ್ತು. ಹಲವಾರು ಪ್ರಾಣಿಗಳೊಂದಿಗೆ ವ್ಯವಹರಿಸುತ್ತಿದ್ದ. ಕರಡಿ ಮರಿಗಳನ್ನು ಮಾತನಾಡಿಸುವುದು, ಚಟುವಟಿಕೆಗಳನ್ನು ಹೇಳಿಕೊಡುವುದು ಇತ್ಯಾದಿಗಳನ್ನು ಮಾಡುತ್ತಿದ್ದ. ಆದರೆ, ಇಷ್ಟು ದೊಡ್ಡ ಕರಡಿ ಪಳಗಿಸಿ ಅಭ್ಯಾಸ ಇರಲಿಲ್ಲ. ಈ ಸಾಹಸಕ್ಕೆ ಕೈ ಹಾಕಬಾರದಿತ್ತು ಎಂದಿದ್ದಾರೆ.
ಸರ್ಕಸ್ ನ ಮತ್ತೋರ್ವ ಪ್ರಾಣಿ ತರಬೇತುದಾರ ಒಲೇಗ್ ಅಲೆಕ್ಸಾಂಡ್ರೋವ್ ಮಾತನಾಡಿ, ಬಹುತೇಕ ಪ್ರಾಣಿಗಳಿಗೆ ಎಷ್ಟೇ ತರಬೇತಿ ನೀಡಿದ್ದರೂ ಅವು ಪ್ರಾಯಕ್ಕೆ ಬರುವ ಅಥವಾ ಬಂದ ನಂತರ ತರಬೇತುದಾರರ ಮಾತನ್ನೂ ಕೇಳುವುದಿಲ್ಲ. ಸಾಲದ್ದಕ್ಕೆ ಅವು ತುಂಬಾ ಮೂಡಿಗಳಾಗಿದ್ದಾಗಲೂ ಮಾತು ಕೇಳುವುದಿಲ್ಲ. 7 ವರ್ಷ ಪ್ರಾಯದ ಯಾಶ ಸಾಧಾರಣವಾಗಿ ಬಹಳ ಸ್ನೇಹಪರತೆಯಿಂದ ಇರುತ್ತದೆ. ಈ ಹಿಂದೆ ಫುಟ್ ಬಾಲ್ ತಂಡದ ಆಟಗಾರರು ಸರ್ಕಸ್ ಗೆ ಬಂದಾಗ ಬಹಳ ಪ್ರಶಂಸೆಗೆ ಪಾತ್ರವಾಗಿತ್ತು. ಅಪಘಾತಕ್ಕೊಳಗಾಗಿ ಗಾಲಿ ಕುರ್ಚಿ (ವ್ಹೀಲ್ ಚೇರ್) ಯಲ್ಲಿ ಬಂದಿದ್ದ ಜಿಮ್ನಾಸ್ಟಿಕ್ ಒಬ್ಬರಿಗೆ ಮುಖ ನೆಕ್ಕುವ ಮೂಲಕ ಔದಾರ್ಯ ಮೆರೆದಿತ್ತು. ಈಗ ಪ್ರೌಢಾವಸ್ಥೆಗೆ ಬರುವ ಹಂತದಲ್ಲಿದ್ದರಿಂದ ಅಷ್ಟು ಸುಲಭವಾಗಿ ಯಾರ ಮಾತನ್ನೂ ಕೇಳುವುದಿಲ್ಲ. ಅದರ ಬೋನಿಗೆ ಹೋಗಿ, ಪಳಗಿಸಲು ಹೊರಟಿದ್ದನ್ನ ಅದು ಸಹಿಸಿದಂತಿಲ್ಲ. ಅದಕ್ಕೆ ಅರ್ಥ ಆಗುವ ಭಾಷೆಯಲ್ಲೇ ಹೇಳದೇ ಇದ್ದರಿಂದ ಕೆರಳಿರಬಹುದು ಎಂದಿದ್ದಾರೆ.