ಬೆಂಗಳೂರು: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ನಡುವೆ ಮಾಸ್ಕ್ ಧರಿಸದಿದ್ದಲ್ಲಿ ಪೊಲೀಸರು ಭಾರೀ ಪ್ರಮಾಣದಲ್ಲಿ ದಂಡ ವಸೂಲಿ ಮಾಡುತ್ತಿದ್ದಾರೆ. ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಹೀಗೆ ವಸೂಲಿಯಾದ ದಂಡದ ಪ್ರಮಾಣ ಬರೋಬ್ಬರಿ 3 ಕೋಟಿ ರೂ. ಗೂ ಹೆಚ್ಚು ಎಂದು ತಿಳಿದುಬಂದಿದೆ.
ಕಳೆದ ನಾಲ್ಕು ತಿಂಗಳಿಂದ ಅಂದರೆ ಜೂನ್ 9 ರಿಂದ ಈವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರಿಂದ 3,05,37,380 ರೂ ನಷ್ಟು ದಂಡ ವಸೂಲಿ ಮಾಡಲಾಗಿದೆ.
ಮಾಸ್ಕ್ ಧರಿಸದೇ ಓಡಾಡಿದ್ದ 1,27,421 ಜನರಿಂದ ಸುಮಾರು 2,73,33,969 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದ 15,271 ಜನರಿಂದ ಸುಮಾರು 32,03,412 ರೂಪಾಯಿ ವಸೂಲಿ ಮಾಡಲಾಗಿದೆ. ಒಟ್ಟಾರೆ 1,42,692 ಜನರಿಂದ 3,05,37,380 ರೂ. ಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.