ಮೈಸೂರು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವ ತುಂಬಾ ಸರಳವಾಗಿ ನಡೆಯಲಿದ್ದು, ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಮಾತ್ರ ಸೀಮಿತವಾಗಿರಲಿದೆ ಎಂಬುದು ಗೊತ್ತಿರುವ ವಿಚಾರ. ಸಂಪ್ರದಾಯದಂತೆ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ನಡೆಯಲಿದ್ದು, ಇದೀಗ ದಸರಾ ಕಾರ್ಯಕ್ರಮಗಳ ಪಟ್ಟಿ ಸಿದ್ಧವಾಗಿದೆ.
ಅಕ್ಟೋಬರ್ 17ರಿಂದ ಶರನ್ನವರಾತ್ರಿ ಆರಂಭವಾಗಲಿದ್ದು, ಅಂದು ಬೆಳಿಗ್ಗೆ 6:15ರಿಂದ 6:30ಕ್ಕೆ ಸಲ್ಲುವ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುತ್ತದೆ. 7:45ರಿಂದ 8:15ರ ಶುಭ ಮುಹೂರ್ತದಲ್ಲಿ ಯದುವಂಶದ ರಾಜವಂಶಸ್ಥ ಯದುವೀರ ಒಡೆಯರ್ ಅವರಿಗೆ ಕಂಕಣಧಾರಣೆ ಮಾಡಲಾಗುತ್ತದೆ.
ಬಳಿಕ ಬೆಳಿಗ್ಗೆ 10 ಗಂಟೆಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಯಲಿದೆ. ಅಕ್ಟೋಬರ್ 21ರಂದು ಬೆಳಿಗ್ಗೆ 9:45ಕ್ಕೆ ಸರಸ್ವತಿ ಪೂಜೆ, ಅ.25ಕ್ಕೆ ಚಂಡಿ ಹೋಮ, ಆಯುಧ ಪೂಜೆ, ಪಟ್ಟದ ಆನೆ, ಕುದುರೆ, ಹಸು ಹಾಗೂ ವಾಹನಗಳಿಗೆ ಪೂಜೆ ನೆರವೇರಲಿದೆ. ಅ.26ರಂದು ಯದುವೀರ್ ಒಡೆಯರ್ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಿದ್ದು, ವಿಜಯದಶಮಿ ದಿನ ಸಾಂಪ್ರದಾಯಿಕವಾಗಿ ಅಂಬಾರಿ ಮೆರವಣಿಗೆ ನಡೆಯಲಿದೆ.