ಕೊರೊನಾ ನಡುವೆಯೇ ಶಿರಾ ಹಾಗೂ ಆರ್.ಆರ್. ನಗರ ಉಪ ಚುನಾವಣೆಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರವನ್ನು ಪ್ರಾರಂಭ ಮಾಡಿವೆ. ಈ ನಡುವೆ ಕೊರೊನಾ ಭಯ ಇದ್ದೇ ಇದೆ. ಒಂದು ಕಡೆ ಚುನಾವಣೆ ಗೆಲ್ಲುವುದು ಚಾಲೆಂಜ್ ಆದರೆ ಮತ್ತೊಂದೆಡೆ ಕೊರೊನಾ ಬರದಂತೆ ಮುಂಜಾಗೃತೆ ವಹಿಸುವುದು ದೊಡ್ಡ ಸವಾಲಾಗಿದೆ.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಚಾಕಚಕ್ಯತೆಯಿಂದ ಕೆಲಸ ನಿರ್ವಹಣೆ ಮಾಡುತ್ತಿದೆ. ಹೌದು, ಒಂದು ಕಡೆ ಮಾಸ್ಕ್ ಧರಿಸಲೇಬೇಕು, ಮತ್ತೊಂದೆಡೆ ಪ್ರಚಾರ ಮಾಡಲೇ ಬೇಕು. ಹೀಗಿರುವಾಗ ಮಾಸ್ಕ್ ಮೇಲೆಯೇ ಅಭ್ಯರ್ಥಿ ಫೋಟೋ ಹಾಗೂ ಚಿನ್ಹೆ ಹಾಕಿಕೊಂಡರೆ ಪ್ರಚಾರವೂ ಆಗುತ್ತದೆ, ಕೊರೊನಾದಿಂದ ರಕ್ಷಣೆಯೂ ಸಿಗುತ್ತದೆ ಎಂಬ ಕಾರಣಕ್ಕೆ ಪ್ರಚಾರಕ್ಕೆ ಹೋಗುವವರು, ಕಾರ್ಯಕ್ರಮದಲ್ಲಿ ಭಾಗಿಯಾಗುವವರು ಹೀಗೆ ಮಾಡುತ್ತಿದ್ದಾರೆ.
ನಿನ್ನೆ ತುಮಕೂರಿನಲ್ಲಿ ಚುನಾವಣಾ ಸಿದ್ದತೆಗಳ ಬಗ್ಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾರ್ಯರ್ತರು ಶಿರಾ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರ ಫೋಟೋ ಹಾಗೂ ಕಾಂಗ್ರೆಸ್ ಪಕ್ಷದ ಚಿನ್ಹೆ ಇರುವ ಮಾಸ್ಕ್ ಧರಿಸಿರುವುದು ಗಮನ ಸೆಳೆದಿದೆ.