ಬುಧವಾರದಂದು ನಡೆದ ಐಪಿಎಲ್ ನ 21ನೇ ಪಂದ್ಯದಲ್ಲಿ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಆರಂಭದಲ್ಲಿ ಶುಭ್ಮನ್ ಗಿಲ್ 11 ರನ್ ಗಳಿಸಿ ಶಾರ್ದುಲ್ ಠಾಕೂರ್ ಬೌಲಿಂಗ್ನಲ್ಲಿ ಔಟಾದರು. ನಂತರ ಬಂದ ನಿತೀಶ್ ರಾಣಾ ಕೇವಲ 9 ರನ್ ಗಳಿಸಿ ಔಟಾಗಿದ್ದು, ಬಳಿಕ ಕಣಕ್ಕಿಳಿದ ಸುನೀಲ್ ನರೈನ್ ಕೂಡ 17 ರನ್ ಗಳಿಸಿ ಕರಣ್ ಶರ್ಮಾ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.
ಆರಂಭಿಕ ಆಟಗಾರ ರಾಹುಲ್ ತ್ರಿಪಾಟಿ ಅವರನ್ನು ಹೊರತುಪಡಿಸಿ ಯಾವ ಬ್ಯಾಟ್ಸ್‌ಮನ್ ಗಳು ಉತ್ತಮ ಪ್ರದರ್ಶನ ತೋರಲಿಲ್ಲ. ರಾಹುಲ್ ತ್ರಿಪಾಠಿ 51 ಎಸೆತಗಳಲ್ಲಿ (81)ರನ್ ಗಳಿಸುವ ಮೂಲಕ ಡ್ವೇನ್ ಬ್ರಾವೊ ಬೌಲಿಂಗ್ನಲ್ಲಿ ಔಟಾದರು. ಒಟ್ಟಾರೆ ಕೆಕೆಆರ್ ತಂಡ ತನ್ನೆಲ್ಲಾ ವಿಕೆಟ್ ಕಳೆದುಕೊಳ್ಳುವ ಮೂಲಕ 167 ರನ್ ಗಳ ಮೊತ್ತ ಕಲೆಹಾಕಿತು.
ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭದಲ್ಲಿ ಫಾಫ್ ಡು ಪ್ಲೆಸಿಸ್ 17 ರನ್ ಗಳಿಸಿ ಶಿವಂ ಮಾವಿ ಬೌಲಿಂಗ್ನಲ್ಲಿ ಔಟಾದರು. ನಂತರ ಆರಂಭಿಕ ಆಟಗಾರ ಶೇನ್ ವಾಟ್ಸನ್ ಹಾಗೂ ಅಂಬಟಿ ರಾಯಡು ಉತ್ತಮ ಜೊತೆಯಾಟವಾಡಿದರು. ಅಂಬಟಿ ರಾಯಡು 30 ರನ್ ಗಳಿಸಿದರೆ ಆರಂಭಿಕ ಆಟಗಾರ ಶೇನ್ ವಾಟ್ಸನ್ 50ರನ್ ಗಳಿಸಿದ್ದು, ಸುನೀಲ್ ನರೈನ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.
ನಾಯಕ ಎಂಎಸ್ ಧೋನಿ 11 ರನ್ ಗಳಿಸಿ ಔಟಾಗಿದ್ದು, ಸ್ಯಾಮ್ ಕರನ್ 17 ರನ್ ಗಳಿಸಿ ರಸೆಲ್ ಬೌಲಿಂಗ್ ನಲ್ಲಿ ಔಟಾದರು. ಕೊನೆ ಹಂತದಲ್ಲಿ ಕೇದರ್ ಜಾದವ್ ಹಾಗೂ ರವೀಂದ್ರ ಜಡೇಜಾ ಗೆಲುವಿಗಾಗಿ ಹೋರಾಟ ನಡೆಸಿದರೂ ಗುರಿ ತಲುಪಲು ಸಾಧ್ಯವಾಗಲಿಲ್ಲ. ಚೆನ್ನೈ ಸೂಪರ್‌ಕಿಂಗ್ಸ್ ತಂಡ 5 ವಿಕೆಟ್ ನಷ್ಟಕ್ಕೆ 157ರನ್ ಗಳಿಸಿದ್ದು, ಈ ಮೂಲಕ ಕೆಕೆಆರ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 10 ರನ್ ಗಳಿಂದ ಜಯ ಸಾಧಿಸಿದೆ.