ವಿಧಾನಸಭೆ ಉಪ ಚುನಾವಣೆ ಹಾಗೂ ವಿಧಾನಪರಿಷತ್ತಿಗೆ ಚುನಾವಣೆ ಘೋಷಣೆಯಾಗಿದ್ದು, ಇದರ ಮಧ್ಯೆ ಆಡಳಿತರೂಢ ಬಿಜೆಪಿಗೆ ಬಂಡಾಯದ ಬಿಸಿ ಎದುರಾಗಿದೆ. ಅದರಲ್ಲೂ ಶಾಸಕಿಯ ಪತಿಯೇ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕಣಕ್ಕಿಳಿದಿರುವುದು ತಲೆಬಿಸಿ ಉಂಟು ಮಾಡಿದೆ.
ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಬಿಜೆಪಿ ಚಿದಾನಂದಗೌಡ ಅವರನ್ನು ಕಣಕ್ಕಿಳಿಸಿದ್ದು, ಅವರ ವಿರುದ್ಧ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ನಿಧನದಿಂದಾಗಿ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಶ್ರೀನಿವಾಸ್ ಬಯಸಿದ್ದರೆನ್ನಲಾಗಿದ್ದು, ಆದರೆ ತಮಗೆ ಟಿಕೆಟ್ ಸಿಗುವುದಿಲ್ಲವೆಂದು ಮನಗಂಡು ವಿಧಾನಪರಿಷತ್ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆಂದು ಹೇಳಲಾಗಿದೆ.