ಕೊರೊನಾ ಸೋಂಕಿತರ ಸಂಖ್ಯೆ ವಿಶ್ವದಾದ್ಯಂತ ಹೆಚ್ಚಾಗ್ತಿದೆ. ಈ ಮಧ್ಯೆ ಡಬ್ಲ್ಯುಎಚ್ ಒ ಖುಷಿ ಸುದ್ದಿಯೊಂದನ್ನು ನೀಡಿದೆ. ಈ ವರ್ಷದ ಅಂತ್ಯದ ವೇಳೆಗೆ ಕೋವಿಡ್ -19 ಲಸಿಕೆ ಸಿದ್ಧವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಆಡ್ನೋಮ್ ಘೆಬಿಯಸ್ ಹೇಳಿದ್ದಾರೆ. ಲಸಿಕೆ ಲಭ್ಯವಿರುವಾಗ ಸಮನಾದ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ನಾಯಕರಲ್ಲಿ ಒಗ್ಗಟ್ಟು ಮತ್ತು ರಾಜಕೀಯ ಬದ್ಧತೆ ಮುಖ್ಯವೆಂದು ಅವರು ಹೇಳಿದ್ದಾರೆ.
ಟೆಡ್ರೊಸ್ ಡಬ್ಲ್ಯುಎಚ್‌ಒ ಕಾರ್ಯನಿರ್ವಾಹಕ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಹೇಳಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಲಸಿಕೆ ಸಿಗಬಹುದೆಂಬ ನಿರೀಕ್ಷೆಯಿದೆ ಎಂದವರು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಕೊವಾಕ್ಸ್ ಯೋಜನೆಯು 168 ದೇಶಗಳನ್ನು ಸೇರಿಸಿದೆ. ಆದರೆ ಯುಎಸ್, ರಷ್ಯಾ ಮತ್ತು ಚೀನಾ ಇನ್ನೂ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿಲ್ಲ. ಲಸಿಕೆಯನ್ನು ಅಭಿವೃದ್ಧಿಪಡಿಸುವುದು, ತಯಾರಿಸುವುದು ಮತ್ತು ಎಲ್ಲರಿಗೂ ತಲುಪುವುದು ಇದರ ಉದ್ದೇಶ. ಲಸಿಕೆಗಳನ್ನು ಸಮನಾಗಿ ವಿತರಿಸುವ ವಿಷಯದಲ್ಲಿ ನಾಯಕರ ರಾಜಕೀಯ ಬದ್ಧತೆ ಮಹತ್ವವೆಂದು ಅವರು ಹೇಳಿದ್ದಾರೆ.