ಟ್ರಾಕ್ಟರ್ ಮೇಲೆ ಸೋಫಾ ಹಾಕಿಕೊಂಡು ರ್ಯಾಲಿ ನಡೆಸಿ ಟೀಕೆಗೆ ಗುರಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ವಿರುದ್ಧ ಸಿಟ್ಟಿಗೆದ್ದಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಎಂಟು ಸಾವಿರ ಕೋಟಿಯ ಬೋಯಿಂಗ್ ವಿಮಾನ ಖರೀದಿಸಿ ಹಣ ವ್ಯರ್ಥ ಮಾಡುತ್ತಿದ್ದಾರೆ. ತಮ್ಮ ಕಂಫರ್ಟ್ ಗಾಗಿ ಐಷಾರಾಮಿ ಬೆಡ್ ಹೊಂದಿರುವ ವಿಮಾನ ಖರೀದಿಸಿದ್ದಾರೆ. ಅದರ ಬಗ್ಗೆ ಯಾರೂ ಪ್ರಶ್ನಿಸಲ್ಲ ಎಂದು ಕುಟುಕಿದ್ದಾರೆ.
ಚೀನಾ ನಮ್ಮ ಗಡಿಯಲ್ಲಿದ್ದಾಗ ಮತ್ತು ಸರ್ಕಾರ ಶಸ್ತ್ರಾಸ್ತ್ರ, ಮದ್ದುಗುಂಡು, ಇಂಧನ, ಆಹಾರ ಮತ್ತು ಚಳಿಗಾಲದ ಅಗತ್ಯ ವಸ್ತುಗಳನ್ನು ಪೂರ್ವ ಲಡಾಖ್ಗೆ ಸಾಗಿಸುತ್ತಿದ್ದಾಗ ಪ್ರಧಾನಿ ಮೋದಿ ಈ ವಿಮಾನಗಳನ್ನು ಬಯಸಿದ್ದರು ಎಂದು ರಾಹುಲ್ ಲೇವಡಿ ಮಾಡಿದರು. ಜತೆಗೆ ವಿಐಪಿ ವಿಮಾನದ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಹೆಸರನ್ನೂ ಎಳೆದುತಂದಿದ್ದಾರೆ.
ಈ ಬಗ್ಗೆ ನೀವು ಮೋದಿಯವರನ್ನು ಏಕೆ ಪ್ರಶ್ನಿಸಬಾರದು? ಈ ದೊಡ್ಡ ಮೊತ್ತಕ್ಕೆ ಖರೀದಿಸಿದ ಬೋಯಿಂಗ್ 777 ಬಗ್ಗೆ ಯಾರೂ ಕೇಳುತ್ತಿಲ್ಲ ಎಂಬುದು ವಿಚಿತ್ರ. ಆದರೆ ಎಲ್ಲರೂ ಟ್ರಾಕ್ಟರ್ ಕುಶನ್ ಬಗ್ಗೆ ಮಾತಾಡಲು ಮುಂದಾಗಿದ್ದಾರೆ ಎಂದರು.
ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಸರ್ಕಾರದ ಕಡೆಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿದ್ದು, ಈ ವಿಮಾನಗಳ ಖರೀದಿ ವಿವಿಐಪಿಗಳಿಗಾಗಿ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ಖರೀದಿ ಪ್ರಾರಂಭವಾಯಿತು ಮತ್ತು ಅದು ಖರೀದಿಯನ್ನು ಮುಕ್ತಾಯಗೊಳಿಸಿದೆ ಎಂದು ತಿಳಿಸಿದೆ.