ಸಂಭೋಗದ ವೇಳೆ ಕಾಂಡೋಮ್ ತೂತು ಮಾಡಿದ್ದರಿಂದ ಸಂಗಾತಿಯ ಖಾಸಗಿತನ ಉಲ್ಲಂಘಿಸಿದ ಆರೋಪದಡಿ ವ್ಯಕ್ತಿಯನ್ನು ಬಂಧಿಸಿರುವ ಪ್ರಕರಣ ವರದಿಯಾಗಿದೆ.
ಇಂಗ್ಲೆಂಡಿನ ಆಂಡ್ರ್ಯೂ ಲೆವಿಸ್ (47) ನನ್ನು ಪ್ರೇಯಸಿಯೇ ಪೊಲೀಸರಿಗೆ ಹಿಡಿದು ಕೊಟ್ಟಿದ್ದು, ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸುವಂತಾಗಿದೆ.
ಕಪಾಟಿನಲ್ಲಿ ಪಿನ್ ಚುಚ್ಚಿದ್ದ ಕಾಂಡೋಮ್ ಗಮನಿಸಿದ ಸಂಗಾತಿ, ಕಸದ ಡಬ್ಬವನ್ನೂ ತಡಕಾಡಿದ್ದು, ಅದರಲ್ಲೂ ಅಂತಹುದೇ ಗರ್ಭನಿರೋಧಕ ದೊರೆತಿದೆ.
ಇದರಿಂದ ಮನನೊಂದು ಪೊಲೀಸರಿಗೆ ದೂರು ನೀಡಿದ್ದು, ಆಂಡ್ರ್ಯೂ ಲೆವಿಸ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಸಂಭೋಗದ ಸಂದರ್ಭದಲ್ಲಿ ಅನ್ಯೋನ್ಯತೆ ಹೆಚ್ಚಬಹುದು ಎಂದುಕೊಂಡು ಹೀಗೆ ಮಾಡಿದೆನೆ ಹೊರತು, ಆಕೆಯನ್ನು ಗರ್ಭಿಣಿ ಮಾಡುವ ಯಾವ ಉದ್ದೇಶವೂ ಇರಲಿಲ್ಲ ಎಂದು ಒಪ್ಪಿಕೊಂಡಿದ್ದಾನೆ.
ಇದನ್ನು ಪೈಶಾಚಿಕ ಕೃತ್ಯ ಎಂದಿರುವ ಸಂಗಾತಿಯು, ಇದು ಒಪ್ಪಿತ ಸಂಬಂಧವಾಗಿದ್ದರೂ ಸುರಕ್ಷತೆಗೆ ಧಕ್ಕೆ ಆಗಿದೆ. ನನ್ನ ಖಾಸಗಿತನವನ್ನೂ ಆತ ಉಲ್ಲಂಘಿಸಿದ್ದಾನೆ. ಹೀಗಾಗಿ ಅತ್ಯಾಚಾರ ಎಂದು ಪರಿಗಣಿಸುವಂತೆ ವಾದ ಮಂಡಿಸಿದ್ದಳು. 2018 ರಲ್ಲಿ ದಾಖಲಾಗಿದ್ದ ಪ್ರಕರಣವೀಗ ಇತ್ಯರ್ಥಗೊಂಡಿದ್ದು, ನ್ಯಾಯಾಲಯವೀಗ ಅತ್ಯಾಚಾರ ಎಂದು ಪರಿಗಣಿಸಿ 4 ವರ್ಷದ ಕಾರಾಗೃಹ ಶಿಕ್ಷೆ ವಿಧಿಸಿದೆ.