ಬೆಂಗಳೂರು: ರಾಜ್ಯ ಮಟ್ಟದ ರೈತರ ಸಮ್ಮೇಳನವನ್ನು ಅಕ್ಟೋಬರ್ 10 ರಂದು ಮಂಡ್ಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ಎಐಸಿಸಿ ಆದೇಶದಂತೆ ರಾಜ್ಯ ಮಟ್ಟದ ರೈತರ ಸಮ್ಮೇಳನವನ್ನು ದಾವಣಗೆರೆಯಲ್ಲಿ ಮಾಡಲು ನಿರ್ಧರಿಸಿದ್ದೆವು. ಆದರೆ ಚುನಾವಣಾ ಆಯೋಗದ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಆಕ್ಟೊಬರ್ 10 ರ ಬೆಳಗ್ಗೆ 11 ಗಂಟೆಗೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ರೈತರನ್ನು ಬಂಡವಾಳಶಾಹಿಗಳ ನಿಯಂತ್ರಣಕ್ಕೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ 25 ರಂದು ಪ್ರತಿಭಟನೆ ಮಾಡಿದ್ದೆವು. ಆಕ್ಟೊಬರ್ 2 ರಂದು ಕಿಸಾನ್ ಮಜ್ದೂರ್ ದಿನ ಆಚರಿಸಿ ತಾಲೂಕು ಮಟ್ಟದಲ್ಲೂ ಹೋರಾಟ ಮಾಡಿದ್ದೆವು. ರೈತರ ಸಮ್ಮೇಳನ ಪಕ್ಷಾತೀತ ಕಾರ್ಯಕ್ರಮ. ಆರು ಜನ ರೈತ ಮುಖಂಡರು ಈ ಸಭೆಯಲ್ಲಿ ಮಾತನಾಡಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸಹಿ ಸಂಗ್ರಹ ಅಭಿಯಾನ:
ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನ ಆರಂಭಿಸುತ್ತಿದ್ದೇವೆ. ನಮ್ಮ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ದೇಶನದಂತೆ 2 ಕೋಟಿ ಸಹಿ ಸಂಗ್ರಹಿಸಲಾಗುವುದು. ಈ ಸಹಿಗಳುಳ್ಳ ಪತ್ರವನ್ನು ಸೋನಿಯಾ ಗಾಂಧಿ ಅವರಿಗೆ ಕಳುಹಿಸುತ್ತೇವೆ. ಅವರು ರಾಷ್ಟ್ರಪತಿ ಅವರಿಗೆ ಸಲ್ಲಿಸಲಿದ್ದಾರೆ. ಈ ರೈತ ವಿರೋಧಿ ಕಾಯ್ದೆಗಳ ರದ್ದತಿಗೆ ಮನವಿ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವರಿಂದಲೇ ರಾಜೀನಾಮೆ:
ಕೇಂದ್ರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಬೇಸತ್ತು ಅಕಾಲಿ ದಳದ ಸಂಸದೆ ಹರ್ ಸಿಮ್ರತ್ ಕೌರ್ ಅವರು ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸರ್ಕಾರ ಹೇಗೆ ರೈತರ ವಿರುದ್ಧ ನಿಂತಿದೆ ಎಂಬುದಕ್ಕೆ ಇದೇ ಸಾಕ್ಷಿ. ಅಕಾಲಿದಳ ಎನ್ಡಿಎ ಮೈತ್ರಿಕೂಟದಿಂದ ಹೊರ ಬಂದಿದೆ. ರೈತರ ಪರವಾಗಿ ಅವರು ಕೈಗೊಂಡಿರುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಕೇಂದ್ರದ ಸಚಿವರೊಬ್ಬರು ಪ್ರತಿಭಟನೆ ಮಾಡುವವರು ರೈತರೇ ಅಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ರೈತರೇ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.