ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಆಕೆ ಸಹೋದರ ಶೋವಿಕ್ ಚಕ್ರವರ್ತಿ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಡ್ರಗ್ಸ್ ಜಾಲದ ನಂಟಿನ ತಿರುವು ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಆಕೆ ಸಹೋದರ ಶೋವಿಕ್ ನನ್ನು ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದರು. ಎನ್ ಸಿ ಬಿ ವಿಚಾರಣೆ ವೇಳೆ ರಿಯಾ, ಡ್ರಗ್ಸ್ ಜಾಲದ ಜೊತೆ ಬಾಲಿವುಡ್ ನ ಘಟಾನುಘಟಿ ನಟ-ನಟಿಯರಿಗೂ ಲಿಂಕಿದೆ ಎಂಬುದನ್ನು ತಿಳಿಸಿದ್ದಳು.
ರಿಯಾ ಚಕ್ರವರ್ತಿ ಹಾಗೂ ಆಕೆ ಸಹೋದರನ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಸೆ.22ರಂದು ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಎನ್ ಡಿ ಪಿ ಎಸ್ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆದರೆ ನ್ಯಾಯಾಲಯ ಇಬ್ಬರಿಗೂ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಿತ್ತು.
ಇದೀಗ ನ್ಯಾಯಾಂಗ ಬಂಧನ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ರಿಯಾ ಹಾಗೂ ಶೋವಿಕ್ ನನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗಿದ್ದು, ಇಬ್ಬರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 20ರವರೆಗೆ ಮತ್ತೆ ವಿಸ್ತರಿಸಿ ನ್ಯಾಯಾಲಯ ಆದೇಶ ನೀಡಿದೆ. ಹೀಗಾಗಿ ರಿಯಾ ಹಾಗೂ ಶೋವಿಕ್ ಗೆ ಇನ್ನಷ್ಟು ದಿನಗಳ ಕಾಲ ಜೈಲೇ ಗತಿಯಾಗಿದೆ.