ಕೊರೊನಾ ಸಾಂಕ್ರಾಮಿಕ ವ್ಯಾಪಕವಾಗಿರುವ ಸಂದರ್ಭದಲ್ಲಿ ವಿವಿಧ ಬಗೆಯ ಖಾಯಿಲೆ ಎದುರಿಸುತ್ತಿರುವ ರೋಗಿಗಳು ಮತ್ತು ಅವರ ಕುಟುಂಬದವರು ಹೈರಾಣಾಗಿದ್ದಾರೆ. ಇಲ್ಲೊಂದು ಘಟನೆಯಲ್ಲಿ ಕ್ಯಾನ್ಸರ್ ಪೀಡಿತ ಮಗನನ್ನು ಖುಷಿ ಪಡಿಸಲು ಆತನ ತಂದೆ ಆಸ್ಪತ್ರೆ ಮುಂದಿನ ಕಾರ್ ಪಾರ್ಕಿಂಗ್‌ನಲ್ಲಿ ನಿಂತು ಡಾನ್ಸ್ ಮಾಡಿದ್ದಾರೆ.
ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಕುಕ್ ಚಿಲ್ಡ್ರನ್ಸ್ ಹೆಲ್ತ್ ಕೇರ್ ಸಿಸ್ಟಮ್ ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿರುವ ಮಕ್ಕಳ ಆಸ್ಪತ್ರೆಯಾಗಿದ್ದು, ಅವರು ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.
ಐಡೆನ್ ಎಂಬ ಬಾಲಕನಿಗೆ ಈ ವರ್ಷದ ಆರಂಭದಲ್ಲಿ ಲಿಂಫೋಸೈಟಿಕ್ ಲ್ಯುಕೇಮಿಯಾ ಇರುವುದು ಪತ್ತೆಯಾಯಿತು. ಅವನ ವಯಸ್ಸು ಕೇವಲ 12 ವರ್ಷ. ಕೊರೊನಾ ಇರುವ ಕಾರಣ ಕುಟುಂಬದವರ ಆಸ್ಪತ್ರೆ ಭೇಟಿಗೆ ಮಿತಿ ಹಾಕಲಾಯಿತು. ಇದು ಮಕ್ಕಳ ಆಸ್ಪತ್ರೆಯಾಗಿದ್ದರಿಂದ, ಒಬ್ಬ ಪೋಷಕರು ಅಥವಾ ಪಾಲನೆ ಮಾಡುವವರು ತಮ್ಮ ಮಗುವಿನೊಂದಿಗೆ ಇರಲು ಅವಕಾಶ ಮಾಡಿಕೊಡಲಾಗಿತ್ತು.
ಐಡೆನ್‌ನ ತಾಯಿ ಲೋರಿ, ಪ್ರತಿ ಮಂಗಳವಾರ ತನ್ನ ಮಗನೊಂದಿಗೆ ಇರಲಿದ್ದಾರೆ. ತಂದೆಗೆ ಮಗನನ್ನು ನೋಡಲು ಸಾಧ್ಯವಾಗದೆ ಹೊರಗುಳಿಯಬೇಕಾಗುತ್ತದೆ. ಆದರೆ ಆತ ತನ್ನ ಮಗನನ್ನು ಕ್ಯಾನ್ಸರ್ ವಿರುದ್ಧದ ಯುದ್ಧದಲ್ಲಿ ಹುರಿದುಂಬಿಸಲು ಪರಿಹಾರ ಕಂಡುಕೊಂಡನು.
ತನ್ನ ಮಗ ಇರುವ ಆಸ್ಪತ್ರೆ ಕಿಟಕಿಯ ಹೊರಗೆ ಒಂದು ಸ್ಥಳವನ್ನು ಆರಿಸಿಕೊಂಡ ಆತ ಅಲ್ಲಿ ಡಾನ್ಸ್ ಮಾಡಿದ. ಅತ್ಯುತ್ತಮ ಹಿಪ್-ಹಾಪ್ ಪ್ರದರ್ಶಿಸಿದ್ದು ಮಗ ಕೂಡ ಖುಷಿಪಟ್ಟಿದ್ದಾನೆ. ಮಗ ಆಸ್ಪತ್ರೆ ಕೊಠಡಿಯಲ್ಲಿ ಖುಷಿಯಿಂದ ಹೆಜ್ಜೆ ಹಾಕುವ, ತಂದೆ ಪಾರ್ಕಿಂಗ್ ಲಾಟ್ ನಲ್ಲಿ ಕುಣಿಯುವ ಭಾವಸ್ಪರ್ಶಿ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೊವು 67,000 ಕ್ಕೂ ಹೆಚ್ಚು ಲೈಕ್ ಮತ್ತು ಸುಮಾರು 5,000 ಕಾಮೆಂಟ್ ಪಡೆದಿದೆ, ಹೆಚ್ಚಿನವು ಐಡೆನ್‌ಗೆ ಶೀಘ್ರವಾಗಿ ಚೇತರಿಸಿಕೊಳ್ಳಲು ಬಯಸುವ ಹಾರೈಕೆಯದ್ದಾಗಿದೆ. ಕೆಲವರು ತಂದೆಯನ್ನು ಶ್ಲಾಘಿಸುತ್ತಿದ್ದಾರೆ.
https://www.facebook.com/cookchildrens/videos/406514170335860