ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಪ್ರಕರಣದ ಬಂಧಿತ ಆರೋಪಿಗಳ ಜೊತೆ ರಿಕ್ಕಿ ರೈ ಸಂಪರ್ಕ ಹೊಂದಿದ್ದ ಹಾಗೂ ಪ್ರಮುಖ ಆರೋಪಿ ಆದಿತ್ಯ ಆಳ್ವ ತಪ್ಪಿಸಿಕೊಳ್ಳಲು ಸಹಾಯ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮುತ್ತಪ್ಪ ರೈ ಅವರ ಬಿಡದಿ ನಿವಾಸ ಹಾಗೂ ಸದಾಶಿವನಗರದಲ್ಲಿರುವ ರಿಕ್ಕಿ ರೈ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದೀಗ ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಡ್ರಗ್ಸ್ ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗೆ ಕರೆದೊಯ್ದಿದ್ದಾರೆ. ಅಲ್ಲದೇ ಮುತ್ತಪ್ಪ ರೈ ಹೆಸರಿನಲ್ಲಿರುವ ಫಾರ್ಚುನರ್ ಕಾರನ್ನು ಕೂಡ ವಶಕ್ಕೆ ಪಡೆದಿದ್ದಾರೆ.
ಡ್ರಗ್ಸ್ ಪ್ರಕರಣದ ಆರೋಪಿ ಆದಿತ್ಯ ಆಳ್ವ ಈಗಾಗಲೇ ಎಸ್ಕೇಪ್ ಆಗಿದ್ದು, ಈ ಬಗ್ಗೆ ಸಿಸಿಬಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ರಿಕ್ಕಿ ಸರಿಯಾಗಿ ಉತ್ತರ ನೀಡಿಲ್ಲ ಎನ್ನಲಾಗಿದೆ. ಅಲ್ಲದೇ ಡ್ರಗ್ ಪೆಡ್ಲರ್ ಯಶಸ್ ಎಂಬಾತನ ಜೊತೆಯೂ ರಿಕ್ಕಿ ಸಂಪರ್ಕವಿರುವುದು ತಿಳಿದು ಬಂದಿದೆ. ಇದೇ ಕಾರಣಕ್ಕೆ ರಿಕ್ಕಿ ರೈನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.